ರಾಣಿಪುರಂ ಜಿಪ್‌ಲೈನ್ ಅಪಘಾತ; ಕೂಡಲೇ ನಷ್ಟ ಪರಿಹಾರ ನೀಡಬೇಕು- ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಒತ್ತಾಯ



ಕಾಸರಗೋಡು : ರಾಣಿಪುರಂನಲ್ಲಿ ಜಿಪ್‌ಲೈನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾಗ ದಾರುಣವಾಗಿ ಸಾವನ್ನಪ್ಪಿದ 25 ವರ್ಷದ ಸನೂಪ್ ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇವೆ ಹಾಗೂ ಅವರ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ.

          ಕೆಲಸಕ್ಕೆ ಸೇರಿದ ಮರುದಿನವೇ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದ ಘಟನೆ ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ. ಸೂಕ್ತ ತರಬೇತಿ ನೀಡದಿರುವುದೇ ಅಪಘಾತಕ್ಕೆ ಕಾರಣ. ಸದರಿ ಸಂಸ್ಥೆಯ ಕಾರ್ಯಾಚರಣೆಗೆ ಪರವಾನಗಿ ಇದೆಯೇ ಎಂದು ಪರಿಶೀಲಿಸಬೇಕು. ಕುಟುಂಬದ ಏಕೈಕ ಆಧಾರವಾಗಿದ್ದ ಸನೂಪ್ ಅವರ ಅಕಾಲಿಕ ನಿಧನವು ಆ ಬಡ ಕುಟುಂಬವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಪರಿಹಾರದ ಜೊತೆಗೆ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

             ಕೇವಲ ಆರ್ಥಿಕ ಲಾಭದ ಉದ್ದೇಶದಿಂದ ಜಿಲ್ಲೆಯಾದ್ಯಂತ ಇಂತಹ ಸಾಹಸ ಕ್ರೀಡಾ ತಾಣಗಳು ತಲೆಯೆತ್ತುತ್ತಿವೆ. ಇಂತಹ ಕೇಂದ್ರಗಳಲ್ಲಿ ಸುರಕ್ಷತಾ ವ್ಯವಸ್ಥೆಗಳು ಮತ್ತು ಉದ್ಯೋಗಿಗಳ ರಕ್ಷಣೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಖಚಿತಪಡಿಸಿಕೊಳ್ಳಬೇಕು. ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಅಶ್ವಿನಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು