ಊಟಕ್ಕೆ ಪದಾರ್ಥ ಇಲ್ಲವೆಂದು ಪತ್ನಿಯನ್ನು ಇರಿದು‌ ಕೊಲೆಗೈದ ಮದ್ಯಪಾನಿ ಪತಿ


 ಊಟಕ್ಕೆ  ಪದಾರ್ಥ (ಸಾರು) ಇಲ್ಲದ ಕಾರಣಕ್ಕೆ ಮದ್ಯಪಾನಿ ಪತಿ, ಪತ್ನಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಮಲಪ್ಪುರಂ ವಂಡೂರು ಕಾಪ್ಪಿಲ್‌ನಲ್ಲಿ ನಡೆದಿದೆ. ಪಾರಶ್ಶೇರಿ ಕುನ್ನುಮ್ಮಲ್ ಪೂಂಕುಳಿ ಫಸೀಲಾ (38) ಮೃತಪಟ್ಟವರು. ಘಟನೆಗೆ ಸಂಬಂಧಿಸಿದಂತೆ ಪತಿ ಕುನ್ನುಮ್ಮಲ್ ರಶೀದ್ (48) ಅವರನ್ನು ವಂಡೂರು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಮಧ್ಯಾಹ್ನದ ಬಳಿಕ ಘಟನೆ ನಡೆದಿದೆ. ರಶೀದ್ ಕಮೂಕು ತೋಟಗಳನ್ನು ಗುತ್ತಿಗೆ ಪಡೆದು ಅಡಕೆ ಕೊಯ್ದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದನು. ಆತ ನಿಯಮಿತವಾಗಿ ಮದ್ಯಪಾನ ಮಾಡಿ ಮನೆಗೆ ಬಂದು ಜಗಳವಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ರಶೀದ್‌ನ ಕಿರುಕುಳದಿಂದಾಗಿ ಫಸೀಲಾ ತನ್ನ ತವರು ಮನೆಗೆ ತೆರಳಿದ್ದರು. ಇತ್ತೀಚೆಗಷ್ಟೇ ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ಅವರನ್ನು ಮತ್ತೆ ಪತಿಯ ಮನೆಗೆ ಕರೆತಂದಿದ್ದರು.

ಘಟನೆ ನಡೆದ ದಿನ ಮದ್ಯಪಾನ ಮಾಡಿ ಮನೆಗೆ ಬಂದ ರಶೀದ್, ಊಟಕ್ಕೆ ಸಾರು ಇಲ್ಲ ಎಂಬ ವಿಚಾರಕ್ಕೆ ಫಸೀಲಾ ಜೊತೆ ಜಗಳವಾಡಿದ್ದಾನೆ. ಬಳಿಕ ಚೂರಿ ತೆಗೆದುಕೊಂಡು ಆಕೆಯ ಎದೆಗೆ ಇರಿದಿದ್ದಾನೆ.

ಗದ್ದಲ ಕೇಳಿ ಓಡಿ ಬಂದ ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಫಸೀಲಾರನ್ನು ಕೂಡಲೇ ವಂಡೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು