ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಕ್ವಾರ್ಟರ್ಸ್ ಕೊಠಡಿಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಮಗುವಿನೊಂದಿಗೆ ಬೆತ್ತಲಾಗಿ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಿ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ₹1.02 ಲಕ್ಷ ದೋಚಿದ ಆರೋಪ ಉಂಟಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ವಿಟ್ಲ, ಸೆರಾಜೆ ನಿವಾಸಿ ಎ.ಎಸ್. ಸುಜಿತ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆಗಸ್ಟ್ 29ರಂದು ಸಂಜೆ 6 ಗಂಟೆ ಸುಮಾರಿಗೆ ಉಕ್ಕಿನಡ್ಕದಲ್ಲಿ ಘಟನೆ ನಡೆದಿದೆ. ಬದಿಯಡ್ಕ ಪೊಲೀಸರು ದಾಖಲಿಸಿರುವ ಪ್ರಕರಣದ ಪ್ರಕಾರ, ಉಕ್ಕಿನಡ್ಕದಲ್ಲಿ ಐವರು ವ್ಯಕ್ತಿಗಳ ತಂಡವು ಮರದ ಕೋಲು ತೋರಿಸಿ ಸುಜಿತ್ ಅವರನ್ನು ಬೆದರಿಸಿದೆ. ಬಳಿಕ ಅವರನ್ನು ಕಾರಿನಲ್ಲಿ ಅಪಹರಿಸಿ ಚೆರ್ಕಳದ ಕೊಠಡಿಯೊಂದಕ್ಕೆ ಕರೆದೊಯ್ದು ಕೂಡಿ ಹಾಕಲಾಗಿದೆ.
ನಂತರ ಬೆದರಿಸಿ ಸುಜಿತ್ ಅವರನ್ನು ವಿವಸ್ತ್ರಗೊಳಿಸಿ, ಆ ಸಮಯದಲ್ಲಿ ಕೊಠಡಿಯಲ್ಲಿದ್ದ ಅಪ್ರಾಪ್ತ ಮಗುವಿನೊಂದಿಗೆ ನಿಲ್ಲಿಸಿ ವಿಡಿಯೋ ಚಿತ್ರೀಕರಿಸಲಾಗಿದೆ. ಹಣ ನೀಡದಿದ್ದರೆ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗಿದೆ.
ಕೊಲ್ಲುವುದಾಗಿ ಬೆದರಿಸಿ ಸುಜಿತ್ ಅವರಿಂದ ₹1,02,000 ಹಣವನ್ನು ಪಡೆದುಕೊಂಡ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ, ಕಂಡರೆ ಗುರುತಿಸಬಹುದಾದ ಐವರು ಆರೋಪಿಗಳ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ತನಿಖೆಯ ಭಾಗವಾಗಿ ವಿವಿಧ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಲು ಆರಂಭಿಸಿದ್ದಾರೆ.
