ಕುಂಬಳೆ: ವಂದೇ ಮಾತರಂ ನಂತಹ ರಾಷ್ಟ್ರೀಯ ಭಾವೈಕ್ಯತೆಯ ಗೀತೆಯನ್ನು ಮತ್ತು ಅದನ್ನು ಹಾಡುವುದನ್ನು ನಿಷೇಧಿಸುವ ಮೂಲಕ ವಿ ಡಿ ಸತೀಶನ್ ಅವರು ಭಾರತದ ವಿಭಜನೆಯ ಕಾಲದ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪಿ ಕೆ ಕೃಷ್ಣದಾಸ್ ಹೇಳಿದರು. ರಾಷ್ಟ್ರ ಸ್ವಾಭಿಮಾನ ಸಮಿತಿಯ ನೇತೃತ್ವದಲ್ಲಿ ಕುಂಬಳೆ ನಗರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ತ್ರಿರಂಗ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜವಾಹರಲಾಲ್ ನೆಹರೂ, ಪಿ ಸಿ ಜೋಶಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ಭಾರತದ ವಿಭಜನೆಯ ನೇತೃತ್ವ ವಹಿಸಿದವರಾಗಿದ್ದರು. ಎಂಟು ದಶಕಗಳ ನಂತರ ಭಾರತವನ್ನು ವಿಭಜಿಸಲು ಕಾಂಗ್ರೆಸ್ ಪಕ್ಷ, ಕಮ್ಯುನಿಸ್ಟ್ ಪಕ್ಷ ಮತ್ತು ಮತೀಯ-ಕೋಮುವಾದಿ ಶಕ್ತಿಗಳು ಕೈಜೋಡಿಸುತ್ತಿವೆ. ವಿದ್ಯಾರ್ಥಿ ಹೋರಾಟದ ಮರೆಯಲ್ಲಿ ಕೇಂದ್ರ ಸರ್ಕಾರವನ್ನು ಕೆಡವಲು ರಾಹುಲ್ ಗಾಂಧಿ ಮತ್ತು 'ಇಂಡಿ' ಮೈತ್ರಿಕೂಟ ಯತ್ನಿಸಿದೆ ಹಾಗೂ ಭಾರತವನ್ನು ಯಾವುದೇ ರೀತಿಯಲ್ಲಿ ವಿಭಜಿಸುವ ಯತ್ನವನ್ನು ದೇಶಪ್ರೇಮಿಗಳು ಹೂತುಹಾಕಲಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ ಎಲ್ ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ ಚಂದ್ರ ಭಂಡಾರಿ, ಅಡ್ವ. ಬಾಲಕೃಷ್ಣ ಶೆಟ್ಟಿ, ರಾಮಪ್ಪ ಮಂಜೇಶ್ವರ, ಸಿ. ಪ್ರಮೀಳಾ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ್ ಯಾದವ್, ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ವಿಕ್ರಮ್ ಪೈ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್‌ಭಾಗ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಎಂ. ಜನನಿ ಮಾತನಾಡಿದರು.
ಹೋಲಿ ಫ್ಯಾಮಿಲಿ ಶಾಲೆಯ ಆವರಣದಿಂದ ಆರಂಭಗೊಂಡ ತ್ರಿರಂಗ ಯಾತ್ರೆಯಲ್ಲಿ ನೂರಾರು ಜನರು ತ್ರಿವರ್ಣ ಧ್ವಜವನ್ನು ಹಿಡಿದು ಭಾಗವಹಿಸಿದ್ದರು.



