ಗೆಳೆಯರ ಜತೆ ಕೊಳದಲ್ಲಿ ಸ್ನಾನಕ್ಕಿಳಿದ ಬಾಲಕ ಮುಳುಗಿ ಮೃತ್ಯು

 


ಕಾಸರಗೋಡು: ಗೆಳೆಯರ ಜತೆ ಕೊಳದಲ್ಲಿ ಸ್ನಾನಕ್ಕಿಳಿದ 8 ನೇ ತರಗತಿ ವಿದ್ಯಾರ್ಥಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಂಗಲ್ಪಾಡಿ ಪೆರಿಂಕಡಿಯ ಅಲಿ ಮತ್ತು ಸುಲೈಕಾ ದಂಪತಿಯ ಪುತ್ರ ಅಬೂಬಕರ್ ಅಸಾನ್ (13) ಮೃತಪಟ್ಟವರು. ಇವರು ಮಂಗಲ್ಪಾಡಿ ಸರಕಾರಿ ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿಯಾಗಿದ್ದರು.

ಮಂಗಳವಾರ ಸಂಜೆ 5 ಗಂಟೆಗೆ ಈ ದುರ್ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಮನೆಯ ಸಮೀಪದ  ಕೊಳದಲ್ಲಿ ಸ್ನಾನ ಮಾಡುವ ವೇಳೆ ಅಬೂಬಕರ್ ಅಸಾನ್ ನೀರಿನಲ್ಲಿ ಮುಳುಗಿದ್ದಾರೆ ಎಂದು ತಿಳಿದುಬಂದಿದೆ. ಸ್ನಾನ ಮುಗಿಸಿ ಮರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಅಬೂಬಕರ್ ಅಸಾನ್ ನಾಪತ್ತೆಯಾಗಿದ್ದರು.

ನಂತರ ನಡೆಸಿದ ಹುಡುಕಾಟದಲ್ಲಿ, ಸಮೀಪದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬಾಲಕ ನೀರಿನಲ್ಲಿ ಮುಳುಗುತ್ತಿರುವುದು ಪತ್ತೆಯಾಗಿದೆ. ಬಳಿಕ ಸ್ಥಳೀಯರು ಮತ್ತು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೊಳದಲ್ಲಿ ಶೋಧ ಕಾರ್ಯ ನಡೆಸಿದರು. ರಾತ್ರಿ 10 ಗಂಟೆ ಸುಮಾರಿಗೆ ಬಾಲಕನನ್ನು ಪತ್ತೆ ಹಚ್ಚಿ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು