ಬದಿಯಡ್ಕದಲ್ಲಿ ವೀರ ಸಾವರ್ಕರ್ ಉಪಾನ್ಯಾಸ; ಸ್ವಾತಂತ್ರ್ಯ ಹೋರಾಟಗಾರರನ್ನು ಹೀಯಾಳಿಸುವುದು ಸ್ವಾರ್ಥ ಹಿತಾಸಕ್ತಿಗಳ ಖಯಾಲಿ-ಪ್ರಕಾಶ್ ಮಲ್ಪೆ


 ಬದಿಯಡ್ಕ : ಸ್ವಾತಂತ್ರ್ಯ ವೀರ ವಿನಾಯಕ ದಾಮೋಧರ ಸಾವರ್ಕರನ್ನು ಅವಹೇಳನಗೊಳಿಸುವವರಲ್ಲಿ ಎರಡು ವಿಧ. ಎಲ್ಲಾ ತಿಳಿದುಕೊಂಡು ಬೇಕೆಂತಲೇ ದುರುದ್ದೇಶ ಪೂರ್ವಕವಾಗಿ ರಾಜಕೀಯ ಪ್ರೇರಿತವಾಗಿ ಅಪಹಾಸ್ಯ ಮಾಡುವವರು ಒಂದು ವಿಭಾಗ. ಇನ್ನೊಂದು ವಿಭಾಗ ಇವರ ಮಾತುಗಳನ್ನು ಕೇಳಿಕೊಂಡು ಅದನ್ನು ನಿಜವೆಂದೇ ನಂಬಿ ಅಪಾರ್ಥ ಮಾಡಿಕೊಂಡವರು.ಮೊದಲನೆ ವಿಭಾಗಕ್ಕೆ ಏನೂ ಮಾಡೋಕ್ಕಾಗದು. ಆದರೆ ಎರಡನೆ ವಿಭಾಗಕ್ಕೆ ನಿಜವೇನೆಂದು ಮನವರಿಕೆ ಮಾಡಿಕೊಡಬೇಕಾದ ಅನಿವಾರ್ಯತೆ ಇದೆ. ಅದು ಇಂತಃ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯವಾಗಬೇಕೆಂದು ವಾಗ್ಮಿ, ಸಾಮಾಜಿಕ ಚಿಂತಕ ಪ್ರಕಾಶ್ ಮಲ್ಪೆ ತಿಳಿಸಿದ್ದಾರೆ.

ಸಂಘಪರಿವಾರದ ಸಹಕಾರದೊಂದಿಗೆ "ಮಂಥನ ವೈಚಾರಿಕ ವೇದಿಕೆ ಬದಿಯಡ್ಕ" ಇದರ ಆಶ್ರಯದಲ್ಲಿ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಭಾನುವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಒಮ್ಮೆ ಇನ್ನೋರ್ವ ಕ್ರಾಂತಿಕಾರಿ ಶುಭಾಶ್ಚಂದ್ರ ಭೋಸ್ ಅವರು ಸಾರ್ವಕರನ್ನು ಭೇಟಿಯಾಗಿ ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿ ಮಾತನಾಡಲು ಬರುತ್ತಾರೆ. ಹಾಗೆ ಬಂದವರಲ್ಲಿ ಸಾವರ್ಕರ್ ಕೇಳುತ್ತಾರೆ ಮುಂದಿನ ಹೋರಾಟದ ಸ್ವರೂಪ ಏನೂಂತ. ಅದಕ್ಕೆ ಶುಭಾಶರು ಇಲ್ಲಿ ಅಲ್ಲಲ್ಲಿ ಬ್ರಿಟಿಷ್ ಅಧಿಕಾರಿಗಳ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.ಅದನ್ನು ಸಂಪೂರ್ಣವಾಗಿ ನಾಶಮಾಡುವುದಾಗಿ ತಿಳಿಸಿದರು. ಅದಕ್ಕೆ ಸಾವರ್ಕರ್ ಬ್ರಿಟಿಷರ ಪುತ್ಥಳಿಗಳನ್ನು ನಾಶ ಮಾಡುವುದು ನಿಮ್ಮ ಕೆಲಸವಾಗಬಾರದು. ಇದೀಗ ಎರಡನೇ ವಿಶ್ವ ಮಹಾಯುದ್ಧ ನಡೀತ್ತಿದೆ. ಬ್ರಿಟಿಷರ ಪರವಾಗಿ ಹೋರಾಟ ಮಾಡುತ್ತಿರುವ ನಮ್ಮ ಯೋಧರ ಬಂಧನ ಆಗುತ್ತಾ ಇದೆ. ನೀವು ಜಪಾನಿಗೆ ಹೋಗಿ ಅವರನ್ನು ಭೇಟಿಯಾಗಿ ಅವರನ್ನು ಒಂದುಗೂಡಿಸಬೇಕು. ಅವರನ್ನು ಬಿಡುಗಡೆಗೊಳಿಸಿ ಬ್ರಿಟಿಷರ ವಿರುದ್ಧ ಹೋರಾಡುವ ಪಡೆಯನ್ನು ಕಟ್ಟಬೇಕು. ಅದು ಬಿಟ್ಟು ಪ್ರತಿಮೆಗಳ ಧ್ವಂಸಕ್ಕೆ ನಿಲ್ಲಬಾರದು ಎಂದು ಸಲಹೆಕೊಟ್ಟರು. ಸಾವರ್ಕರ ಸಲಹೆಯನ್ನು ಶಿರಸಾವಹಿಸಿ ಸ್ವೀಕರಿಸಿದ ಶುಭಾಶ್ಚಂದ್ರರು ಎನ್ ಐ ಎಯನ್ನು ಕಟ್ಟಿದ್ದು ಇತಿಹಾಸ. ಈ ವಿಷಯವನ್ನು ಅವರು ಸಿಂಗಾಪುರದಲ್ಲಿ ನಡೆಸಿದ ರೇಡಿಯೋ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹೋರಾಟಕ್ಕೆ ಹೊಸದಿಶೆಯನ್ನು ತೋರಿಸಿದ್ದು ಸಾವರ್ಕರ್ ಎಂದು ಅವರು ಹೇಳಿಕೊಂಡಿದ್ದಾರೆ ಎಂದವರು ಬೊಟ್ಟು ಮಾಡಿದರು.

ಸಾವರ್ಕರ್ ಅವರು 1924ರಲ್ಲಿ ಒಂದನೇ ಜೀವಾವಧಿ ಶಿಕ್ಷೆ ಕಳೆದು ಶರತ್ತು ಬದ್ಧವಾಗಿ ಬಿಡುಗಡೆಯಾಗಿ ಬಂದ ಬಳಿಕ ಅವರು ಸ್ವೀಕರಿಸಿದ್ದು ಶ್ರೀ ನಾರಾಯಣಗುರುಗಳು ಮತ್ತು ಸ್ವಾಮೀ ವಿವೇಕಾನಂದರ ಹಾದಿಯನ್ನಾಗಿತ್ತು. ಅಸ್ಪೖಷ್ಯತೆ ತೀವ್ರವಾಗಿ ತಾಂಡವ ಆಡುತ್ತಿರುವಾಗ ಇದು ನಿವಾರಣೆಯಾಗದೆ ಸಮಾಜ ಉದ್ಧಾರ ಆಗದೆಂದು ಅವರು ಭಾವಿಸಿದ್ದರು. ಇದಕ್ಕಾಗಿ ಅವರು ಪೂನಾದಲ್ಲಿ ಎಲ್ಲಾ ಜಾತಿಯವರಿಗೂ ಅದರಲ್ಲೂ ಮುಖ್ಯವಾಗಿ ದಲಿತ ಸಮಾಜಕ್ಕೆ ಮುಕ್ತ ಪ್ರವೇಶ ದೊರೆಯುವಂತೆ ಮಾಡಲು ಪತಿತಪಾವನ ದೇವಾಲಯವನ್ನೇ ನಿರ್ಮಿಸಿದರು. ಮತ್ತು ಎಲ್ಲಾ ಸಮಾಜಕ್ಕೂ ಮುಕ್ತ ಪ್ರವೇಶವನ್ನು ಘೋಷಣೆ ಮಾಡಿದರು. ಇದರಿಂದ ಖುಷಿಗೊಂಡ ಡಾ. ಅಂಬೇಡ್ಕರ್ ಅವರನ್ನು ಈ ಮಂದಿರದ ಉದ್ಘಾಟನೆಗೆ ಆಮಂತ್ರಿಸುತ್ತಾರೆ. ಆದರೇ ಕಾರ್ಯದೊತ್ತಡದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಬಾಬಾ ಅಂಬೇಡ್ಕರ್ ಅವರು ತನ್ನ ಪ್ರತಿನಿಧಿಯನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟಿದ್ದರು. ಈ ದೇವಾಲಯದಲ್ಲಿ ಅವರು ಸಾಮೂಹಿಕ ಸಹಪಂಕ್ತಿ ಭೋಜನಕ್ಕೆ ಆದ್ಯತೆ ನೀಡಿದರು. ತನ್ಮೂಲಕ ಅಸ್ಪೖಷ್ಯತೆಯ ನಿರ್ಣಾಮಕ್ಕೆ ಬಲವಾದ ಪ್ರಯತ್ನವನ್ನವರು ಮಾಡಿದರು ಎಂದವರು ನೆನಪಿಸಿಕೊಂಡರು.

ಸಾವರ್ಕರ್ ಅವರ ಮಾತುಗಳಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಸಮರಕ್ಕೆ ದುಮುಕಿದ ಅನೇಕ ಮಂದಿ ಕ್ರಾಂತಿಕಾರಿಗಳಿದ್ದಾರೆ. ಶುಭಾಶ್ಚಂದ್ರ ಭೋಸ್, ಖುದಿರಾಮ್, ಮದನ್ ಲಾಲ್ ದಿಂಗ್ರಾ, ಭಗತ್ ಸಿಂಗ್ ಮೊದಲಾದವರು ಈ ಸಾಲಲ್ಲಿ ಬರುತ್ತಾರೆ. ಭಗತ್ ಸಿಂಗಂತೂ ಸಾವರ್ಕರ್ ಕುರಿತಾಗಿ ಒಂದು ಕವಿತೆಯನ್ನೇ ಬರೆದಿದ್ದಾರೆ. ಮಾತ್ರವಲ್ಲ ಅವರಿಗೆ " ವೀರ" ಎನ್ನುವ ಬಿರುದನ್ನೇ ಸನ್ಮಾನಿಸಿದ್ದಾರೆ. ನಮ್ಮ ದೇಶವನ್ನು ಆಳಿ ನಮ್ಮನ್ನು ಗುಲಾಮಗಿರಿಗೆ ತಳ್ಳಿದ ಇಂಗ್ಲೀಷರ ನೆಲದಲ್ಲೇ ಭಾರತೀಯರನ್ನು ಒಗ್ಗೂಡಿಸಿಕೊಂಡು ಅವರ ವಿರುದ್ಧ ಹೋರಾಟಕ್ಕೆ ದುಮುಕಿದ ಯಾವ ಸ್ವಾತಂತ್ರ್ಯ ವೀರನೂ ಇನ್ನೊಬ್ಬನಿಲ್ಲ. ಆದ್ದರಿಂದ ಸಾವರ್ಕರ್ ಇತರ ಹೋರಾಟಗಾರರಿಂದ ಭಿನ್ನವಾಗಿ ನಿಲ್ಲುತ್ತಾರೆ. ಇವತ್ತು ಇಂತಃ ದೇಶಪ್ರೇಮಿಗಳ ತ್ಯಾಗವನ್ನು ಅಪಹಾಸ್ಯ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ಅಂದಿನ ಅವರ ಹೋರಾಟದ ಕುರಿತಾಗಿ ಅರಿತುಕೊಂಡು ಉತ್ತರಿಸಬೇಕಾಗಿದೆ. ಬದಿಯಡ್ಕದ ಅಧ್ಯಾಪಕ ಗುರು ಪ್ರಸಾದ್ ಮಾಸ್ತರ್ ಅವರು ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ರಸಪ್ರಶ್ನೆಯಲ್ಲಿ ಸಾವರ್ಕರ್ ಕುರಿತು ಪ್ರಶ್ನೆ ಕೇಳಿದ್ದು ತಪ್ಪಲ್ಲ. ಆದರೇ ಸಾವರ್ಕರವರ ಹೆಸರು ಕೇಳಿದರೇನೆ ಉರಿದು ಬೀಳುವ ಕೀಳು ಮಟ್ಟದ ಚಿಂತನೆಯನ್ನು ಹೊಂದಿದವರಿಗೆ ಇದು ಸಹ್ಯವಾಗದು. ಇಂತಃ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಂತಃವರಿಗೆ ಉತ್ತರ ನೀಡಬೇಕೆಂದು ಅವರು ಕರೆ ನೀಡಿದರು. 

ಕಾರ್ಯಕ್ರಮದ ಮೊದಲಿಗೆ ಗಣ್ಯರಿಂದ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ರಾ.ಸ್ವ.ಸೇ.ಸಂ.ದ ಬದಿಯಡ್ಕ ಖಂಡ್ ನ ಸಂಘ ಚಾಲಕ್ ರಮೇಶ್ ಕಳೇರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾಸರಗೋಡು ಜಿಲ್ಲಾ ಪ್ರಚಾರ ಪ್ರಮುಖ್ ಬಾಲಕೃಷ್ಣ ಏಣಿಯರ್ಪು ಸ್ವಾಗತಿಸಿ, ಬಾಲಗೋಕುಲದ ಜಿಲ್ಲಾಧ್ಯಕ್ಷ ದಿನೇಶ್ ಮಾಸ್ತರ್ ಕೆಡೆಂಜಿ ವಂದಿಸಿದರು. ಬದಿಯಡ್ಕ ಖಂಡ್ ನ ಪ್ರಚಾರ ಪ್ರಮುಖ್ ಭಗತ್ ಗಣೇಶ್ ಮುಂಡಾನ್ ತ್ತಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಆಕಾಶ್ ಬದಿಯಡ್ಕ ವಂದೇ ಮಾತರಂ ಹಾಡಿದರು.ಕುಮಾರಿ ತಸ್ಪೈ ಸಾವರ್ಕರ್ ರಚಿಸಿದ "ಜಯೋಸ್ತುತೆ" ಹಾಡನ್ನು ಆಲಾಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು