ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗಳ ಮಹಾಸಭೆ ಹಾಗೂ ಲೋಗೋ ಬಿಡುಗಡೆ


ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಮಾರ್ಗದರ್ಶನ ಹಾಗೂ ದಿವ್ಯ ಆಶೀರ್ವಾದಗಳೊಂದಿಗೆ 2027ರ ಜನವರಿ 19ರಿಂದ 26ರವರೆಗೆ ನಡೆಯಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ, ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಉಪಸಮಿತಿ ಹಾಗೂ ಸರ್ವ ಸಮಿತಿಗಳ ಮಹಾಸಭೆಯು ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಗಳು, ವಿವಿಧ ಸಮಿತಿಗಳ ಕಾರ್ಯಯೋಜನೆಗಳು ಹಾಗೂ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಲೋಗೋವನ್ನು ಅನಾವರಣಗೊಳಿಸಲಾಯಿತು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಹಾಗೂ ಧಾರ್ಮಿಕ ಮುಂದಾಳು ಶ್ರೀ ಮಧುಸೂಧನ ಅಯ್ಯರ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಕ್ಷಾಧಿಕಾರಿಗಳಾದ ಶ್ರೀ ಕೆ. ಮಾಧವ ಹೇರಳ, ಹಿರಿಯ ಸಾಮಾಜಿಕ ಕಾರ್ಯಕರ್ತ; ರಕ್ಷಾಧಿಕಾರಿಗಳಾದ ಶ್ರೀ ಶಶಿಧರ ಭಟ್ ಆನೆಮಜಲು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ;

ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದಾ ಭಟ್, ಶಿಕ್ಷಕಿ; ಖಜಾಂಜಿ ಶ್ರೀ ಈಶ್ವರ ಭಟ್ ಕಿಳಿಂಗಾರು, ಪ್ರಧಾನ ಕಾರ್ಯದರ್ಶಿ ವಾಮನ ಆಚಾರ್ಯ, ಸಾಮಾಜಿಕ ಕಾರ್ಯಕರ್ತ; ಉಪಾಧ್ಯಕ್ಷ ಡಾ. ಶ್ರೀನಿಧಿ ಸರಳಾಯ, ಖ್ಯಾತ ವೈದ್ಯರು;

 ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀ ನವೀನ್ ಭಟ್ ಕುಂಜರಕಾನ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ; ಖಜಾಂಜಿ ವಾಸುದೇವ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಕೆ.ಎಂ. ಶರ್ಮಾ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ತಮ್ಮ ಸಮಿತಿಗಳ ಕಾರ್ಯಚಟುವಟಿಕೆಗಳ ಪ್ರಗತಿ ವರದಿಯನ್ನು ಮಂಡಿಸಿ, ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಲಹೆ–ಸೂಚನೆಗಳನ್ನು ನೀಡಿದರು. ಬ್ರಹ್ಮಕಲಶೋತ್ಸವದ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು ಸಭೆಯಲ್ಲಿ ಒಮ್ಮತ ವ್ಯಕ್ತವಾಯಿತು.

ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಮಾರ್ಗದರ್ಶನ ಹಾಗೂ ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಕಲಶೋತ್ಸವವನ್ನು ಭಕ್ತಿಭಾವದಿಂದ, ಯಶಸ್ವಿಯಾಗಿ ಹಾಗೂ ವ್ಯವಸ್ಥಿತವಾಗಿ ನೆರವೇರಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.


ಶ್ರೀ ವಾಮನ ಆಚಾರ್ಯ ಅವರು ಸ್ವಾಗತಿಸಿ ಶ್ರೀ ಕೆ ಎಂ ಶರ್ಮಾ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಈಶ್ವರ ಭಟ್ ಕಿಳಿಂಗಾರು ಅವರು ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು