ಅಪ್ರಾಪ್ತ ಸಹೋದರಿಯರನ್ನು ವಸತಿಗೃಹಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಗಳು ಬಂಧನ
ಕಾಸರಗೋಡು: ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಬೆಳೆಸಿ, ಅಪ್ರಾಪ್ತ ವಯಸ್ಕರಾದ ಇಬ್ಬರು ಸಹೋದರಿಯರನ್ನು ಅಪಹರಿಸಿ ವಸತಿಗೃಹದಲ್ಲಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದ ನಿವಾಸಿಗಳಾದ ರಿಜ್ವಾನ್ (23) ಮತ್ತು ಮುಹಮ್ಮದ್ ಸಅದ್ (19) ಎಂಬುವವರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ 16 ಮತ್ತು 14 ವರ್ಷ ವಯಸ್ಸಿನ ಬಾಲಕಿಯರು ಈ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
ಬಾಲಕಿಯರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡ ಆರೋಪಿಗಳು, ಅವರನ್ನು ಆಮಿಷವೊಡ್ಡಿ ಅಪಹರಿಸಿ ವಿವಿಧ ವಸತಿಗೃಹಗಳಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಬಾಲಕಿಯರು ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು ನೀಡಿದ ದೂರಿನ ಮೇರೆಗೆ, ಸೈಬರ್ ಸೆಲ್ ಸಹಾಯದಿಂದ ಪೊಲೀಸರು ನಡೆಸಿದ ಸಮಗ್ರ ತನಿಖೆಯ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಅಪ್ರಾಪ್ತ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ - POCSO), ಅಪಹರಣ ಸೇರಿದಂತೆ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ವೈದ್ಯಕೀಯ ತಪಾಸಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕಿಯರನ್ನು ವೈದ್ಯಕೀಯ ತಪಾಸಣೆ ಮತ್ತು ಕೌನ್ಸಿಲಿಂಗ್‌ಗೆ ಒಳಪಡಿಸಲಾಗಿದೆ.
