ಆಲಪ್ಪುಳ: ಆಲಪ್ಪುಳ ಕರುವಟ್ಟದಲ್ಲಿ 74 ಬರ್ಷದ ವೃದ್ಧನ ಕೊಲೆ ಪ್ರಕರಣದ ಹಿಂದೆ 13 ವರ್ಷದ ಮೊಮ್ಮಗಳ ಕ್ವಟೇಶನ್ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮೊಮ್ಮಗಳು ಸೇರಿದಂತೆ ಅಪ್ರಾಪ್ತರಾದ 4 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕರುವಟ್ಟ ನಿವಾಸಿ ಶಿವನ್‌ಕುಟ್ಟಿ ಅವರನ್ನು ಇತ್ತೀಚೆಗೆ ತಮ್ಮ ಮನೆಯಲ್ಲಿ ಮೃತಪಟ್ಟಿರುವುದನ್ನು ಪತ್ತೆ ಹಚ್ಚಲಾಗಿತ್ತು. ವಿಶೇಷವೆಂದರೆ, ಕೊಲೆ ನಡೆಸುತಗತಿರುವ ದೃಶ್ಯವನ್ನು ಆರೋಪಿಗಳು ಆ ಬಾಲಕಿಗೆ ವೀಡಿಯೊ ಕಾಲ್ ಮೂಲಕ ತೋರಿಸಲಾಗಿತ್ತು.
ಶನಿವಾರ ರಾತ್ರಿ ಶಿವನ್‌ಕುಟ್ಟಿಯವರ ಮೃತದೇಹ ಮನೆಯಲ್ಲಿ ಕಂಡುಬಂದಿತ್ತು. ಭಾನುವಾರ ಬೆಳಿಗ್ಗೆ ಸಂಬಂಧಿಕರು ಮನೆಗೆ ಬಂದು ಬಾಗಿಲು ತೆಗೆದು ನೋಡಿದಾಗ ಶಿವನ್‌ಕುಟ್ಟಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಕೈಕಾಲುಗಳನ್ನು ಕಟ್ಟಿಹಾಕಿ, ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಲಾಗಿತ್ತು. ಮಲಗುವ ಕೋಣೆ ಹಾಗೂ ಹಾಲಿನಲ್ಲಿ ಅಚ್ಚುಕಟ್ಟಾಗಿ ಮೆಣಸಿನಪುಡಿಯನ್ನು ಕೂಡ ಚೆಲ್ಲಲಾಗಿತ್ತು. ಈ ಕುರಿತು ನಡೆಸಿದ ತೀವ್ರ ತನಿಖೆಯು 13 ವರ್ಷದ ಮಿಮ್ಮಗಳ ಕಡೆಗೆ ಬೆರಳು ಮಾಡಿದೆ.
ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿ ಐ ಫೋನ್ ಖರೀದಿಸುವ ಸಲುವಾಗಿ ಈ ಬಾಲಕಿ ತನ್ನ ಮೂವರು ಸ್ನೇಹಿತರಿಗೆ ಸುಪಾರಿ (ಕ್ವಟೇಷನ್) ನೀಡಿದ್ದಳು. ಕೊಲ್ಲಂ ಮೂಲದ ಮೂವರು ಅಪ್ರಾಪ್ತ ಬಾಲಕರೇ ಈ ಕೃತ್ಯ ಎಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿಯೇ ಶಿವನ್‌ಕುಟ್ಟಿಯ ಮನೆಗೆ ನುಗ್ಗಿದ ಇವರು, ಕೈಕಾಲುಗಳನ್ನು ಕಟ್ಟಿಹಾಕಿ ಕ್ರೂರವಾಗಿ ಹತ್ಯೆಗೈದಿದ್ದಾರೆ. ಕೊಲ್ಲಂ ಪರವೂರು ರೈಲು ನಿಲ್ದಾಣದ ಬಳಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಾಗಿರುವ ನಾಲ್ವರು ಅಪ್ರಾಪ್ತರನ್ನು ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸಲಾಗುವುದು. ಕೌನ್ಸಿಲಿಂಗ್ ಪೂರ್ಣಗೊಂಡ ಬಳಿಕ ಇವರನ್ನು ವಿಚಾರಣೆಗೆ ಒಳಪಡಿಸಲಾಗುವುದು.
