ಕೆಲಸಕ್ಕೆಂದು ಹೇಳಿ ಮನೆಯಿಂದ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೃತದೇಹ ಕೊಳದಲ್ಲಿ ಪತ್ತೆ


 

ಕಾಸರಗೋಡು: ಕೆಲಸಕ್ಕೆಂದು ಹೇಳಿ ಮನೆಯಿಂದ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೃತದೇಹ ಕೊಳದಲ್ಲಿ  ಪತ್ತೆಯಾಗಿದೆ. ಉಪ್ಪಳದ ಕೊಂಡೆವೂರಿನ ದಿವಂಗತ ನೇಮರಾಜ್ ಶೆಟ್ಟಿ ಎಂಬವರ ಪುತ್ರ ಸಂದೀಪ್ ಶೆಟ್ಟಿ ಅಲಿಯಾಸ್ ಅಣ್ಣು (44) ಅವರ ಮೃತದೇಹವು ಮನೆಯ ಸಮೀಪದ ತೋಟದ ಕೊಳದಲ್ಲಿ ಪತ್ತೆಯಾಗಿದೆ.  ನಿನ್ನೆ (ಸೋಮವಾರ) ಬೆಳಿಗ್ಗೆ ಮನೆಯಿಂದ ಉಪ್ಪಳದ ಶಾರದಾ ನಗರದಲ್ಲಿರುವ ಸೋಡಾ ಫ್ಯಾಕ್ಟರಿಯ ಕೆಲಸಕ್ಕೆ ಹೋಗುತ್ತಿರುವುದಾಗಿ ಹೇಳಿ ಹೊರಟಿದ್ದರು.

ಮಧ್ಯಾಹ್ನದವರೆಗೂ ಸಂದೀಪ್ ಶೆಟ್ಟಿ ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ, ಸ್ನೇಹಿತರು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತದನಂತರ ಸ್ನೇಹಿತರು ಮತ್ತು ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾಗ, ಸಂಜೆ ಸುಮಾರು 6:30ರ ವೇಳೆಗೆ ಕೊಳದ ದಡದಲ್ಲಿ ಸಂದೀಪ್ ಶೆಟ್ಟಿ ಅವರ ಶರ್ಟ್ ಕಂಡುಬಂದಿದೆ. ಕೊಳಕ್ಕೆ ಬಿದ್ದಿರಬಹುದು ಎಂಬ ಶಂಕೆಯ ಆಧಾರದ ಮೇಲೆ ಮಂಜೇಶ್ವರ ಪೊಲೀಸ್ ಹಾಗೂ ಉಪ್ಪಳ ಅಗ್ನಿಶಾಮಕ ದಳದ ಸಿಬ್ಬಂದಿ ಕೊಳದಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಗಿಯಿತು.

ಸಂದೀಪ್ ಶೆಟ್ಟಿ ಅವರ ಮನೆಗೆ ಕುಡಿಯುವ ನೀರು ಪೂರೈಸುವ ಮೋಟಾರನ್ನು ಇದೇ ಕೊಳದಲ್ಲಿ ಅಳವಡಿಸಲಾಗಿತ್ತು. ಮೋಟಾರಿನ ಫುಟ್ ವಾಲ್ವ್‌ನಲ್ಲಿ ಹಿಂದೆ ಸಣ್ಣ ತೊಂದರೆಯಿತ್ತು ಎಂದು ಹೇಳಲಾಗಿದೆ. ಈ ದೋಷವನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದಾಗ ಆಕಸ್ಮಿಕವಾಗಿ ಕಾಲ ಜಾರಿ ಕೊಳಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನಳಿನಿ ಅವರು ಸಂದೀಪ್ ಶೆಟ್ಟಿ ಅವರ ತಾಯಿ. ಸಹೋದರರು: ಸಂದೇಶ್ ಶೆಟ್ಟಿ, ಸಂಪತ್ ಶೆಟ್ಟಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು