ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ: ಹಣಕಾಸಿನ ವಿಚಾರದಲ್ಲಿ ವೈಮನಸ್ಸು: ಹತ್ಯೆಗೆ ಸುಪಾರಿ


 ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ: ಹಣಕಾಸಿನ ವಿಚಾರದಲ್ಲಿ ವೈಮನಸ್ಸು: ಹತ್ಯೆಗೆ ಸುಪಾರಿ


ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ


ಹಣಕಾಸಿನ ವಿಚಾರದಲ್ಲಿ ವೈಮನಸ್ಸು: ಹತ್ಯೆಗೆ ಸುಪಾರಿ


ಉಡುಪಿ: ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ (55) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಕಾಪು ತಾಲ್ಲೂಕಿನ ಮುದರಂಗಡಿಯ ಸೆಂಟ್ ಕ್ಲೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿರುವ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಗೆ ಬಂದಿದ್ದ ಡೇವಿಡ್ ಡಿಸೋಜಾ, ಬಳಿಕ ತಮ್ಮ ಥಾರ್ ವಾಹನದ ಚಾಲಕನ ಬದಿಯ ಬಾಗಿಲ ಬಳಿ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಈ ಸಂಬಂಧ ಶಿವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.


ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಬೈಂದೂರಿನ ಒತ್ತಿನೆಣೆ ಬಳಿ ಬಸ್ ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದರು.


ಆರೋಪಿಗಳನ್ನು ಬೆನ್ನಟ್ಟಿದ ವೇಳೆ ರಾಜು (42), ಉತ್ತರ ಪ್ರದೇಶದ ಧಾಣಾ ಪಿಲ್ಲಿ ನಿವಾಸಿ, ಕಾಪು ಠಾಣೆಯ ಪಿಎಸ್ಐ ತೇಜಸ್ವಿ ಅವರನ್ನು ದೂಡಿ, ಪಿಸ್ತೂಲ್‌ನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲ್‌ನ್ನೂ ವಶಪಡಿಸಿಕೊಳ್ಳಲಾಗಿದೆ. ಗುಂಡಿನ ದಾಳಿಯಲ್ಲಿ ಪಿಎಸ್ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.


ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉತ್ತರಾಖಂಡದ ಅಜಯ್ ರಸ್ತೋಗಿ ಅಲಿಯಾಸ್ ಅನ್ಮೋಲ್ (23) ಅವರನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ಬಿಹಾರದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಅವರನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಶನಿವಾರ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ.


ಹಣಕಾಸಿನ ವೈಮನಸ್ಸು ಹತ್ಯೆಗೆ ಕಾರಣ:

ಡೇವಿಡ್ ಡಿಸೋಜಾ ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದರೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೃತ್ಯಕ್ಕೆ ಸಹಕರಿಸಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆ ಕಾರ್ಯ ಮುಂದುವರಿದಿದೆ.

ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಎಮಾರ್‌ಳಲ್ಲಿ ಬಿಟ್ಟು ಹೋಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬಿಳಿಯಪ್ಪ ಅವರ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಅಜ್ಮಲ್ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ವಿವಿಧ ಠಾಣೆಗಳ ಪಿಎಸ್‌ಐಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾ ತಂಡ, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್ ಸೆಲ್ ತಂಡವೂ ಕಾರ್ಯಾಚರಣೆಗೆ ಸಹಕರಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು