ಬದಿಯಡ್ಕದಲ್ಲಿ ಕೃಷಿಕರ ದಿನಾಚರಣೆ; ಸಾಧಕ ಕೃಷಿಕರಿಗೆ ಸನ್ಮಾನ


ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಕೃಷಿಭವನದ ನೇತೃತ್ವದಲ್ಲಿ ಸಿಂಹಮಾಸ ೧ರಂದು ಸೋಮವಾರ ಬದಿಯಡ್ಕ ಕನ್ಯಾನ ಕನ್ವೆನ್ಶನ್ ಹಾಲ್‌ನಲ್ಲಿ ಕೃಷಿಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾಸರಗೋಡು ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿ ಮಾತನಾಡುತ್ತಾ ಆಧುನಿಕ ಯುಗದಲ್ಲಿ ಕೃಷಿ ಎದುರಿಸುತ್ತಿರುವ ಸವಾಲುಗಳು ಸಣ್ಣದಲ್ಲ. ಹವಾಮಾನ ವೈಪರೀತ್ಯ, ಕೀಟಬಾಧೆ, ಕಾರ್ಮಿಕರ ಅಭಾವ ಮತ್ತು ಸೂಕ್ತ ಮಾರುಕಟ್ಟೆ ಬೆಲೆಯ ಕೊರತೆ ರೈತರನ್ನು ಕಾಡುತ್ತಿದೆ. ಯುವಕರು ಕೃಷಿಕರತ್ತ ಆಕರ್ಷಿತರಾಗಬೇಕು ಎಂದು ಅವರು ಕರೆಯಿತ್ತರು. 

ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷ ಶಂಕರ ಡಿ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ, ಭತ್ತ, ಕಾಳುಮೆಣಸು, ತರಕಾರಿ ಹಾಗೂ ಹೂವಿನ ಕೃಷಿಯನ್ನು ನೆಚ್ಚಿಕೊಂಡು ಬಾಳುವ ಸಾವಿರಾರು ಕುಟುಂಬಗಳಿವೆ. ಕೃಷಿ ಎಂಬುದು ಕೇವಲ ಜೀವನಾಧಾರವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಪಾರಂಪರಿಕ ಶಕ್ತಿ. ಕೃಷಿಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಯುವಕರು ಮುಂದೆಬರಬೇಕು ಎಂದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಬ್ಲೋಕ್ ಪಂಚಾಯಿತಿ ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಎಸ್.ಮೊಯ್ದು, ಜಿಲ್ಲಾ ಪಂಚಾಯತು ಸದಸ್ಯ ರಾಮಪ್ಪ ಮಂಜೇಶ್ವರ, ಬದಿಯಡ್ಕ ಗ್ರಾಮ ಪಂಚಾಯತು. ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಹಮೀದ್ ಕೆಡೆಂಜಿ, ರಜನಿ ಜಿ.ಆರ್., ಅವಿನಾಶ್ ರೈ, ಬ್ಲೋಕ್ ಪಂಚಾಯಿತಿ ಸದಸ್ಯ ಖಾದರ್ ಮಾನ್ಯ, ಸಿಡಿಎಸ್ ಅಧ್ಯಕ್ಷೆ ಸುಲೋಚನ, ಗ್ರಾಮಪಂಚಾಯತಿಯ ವಿವಿಧ ವಾರ್ಡುಗಳ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರಮುಖರು, ಕೃಷಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಾಧಕ ಕೃಷಿಕರಾದ ರಘುನಾಥ ರೈ ಮೇಗಿನಕಡಾರು, ವಾಮನ ನಾಯ್ಕ ಏಳ್ಕಾನ, ಕೃಷ್ಣಪ್ರಸಾದ ಅಮ್ಮಂಗಲ್ಲು, ಚಂದ್ರ ಜಿ.ಗೋಳಿಯಡ್ಕ, ಮೀನಾಕ್ಷಿ ಪುರಂದರ ರೈ ವಳಮಲೆ, ವಿನೋದ್ ಮೇಗಿನಡ್ಕ, ರವಿಶಂಕರ ಕೆ.ಕೊಲ್ಲಂಪಾರೆ, ಮಶೂದ್ ಏವಿಂಜ ಇವರನ್ನು ಅಭಿನಂದಿಸಲಾಯಿತು.ಕೃಷಿ ಅಧಿಕಾರಿ ಬಿಂದು ಜೋರ್ಜ್ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಮೋಹನನ್ ಸಿ. ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು