ಕೊಚ್ಚಿ: ಮಗ ಅಕಾಲಿಕವಾಗಿ ಮರಣ ಹೊಂದಿದ ಹಿನ್ನೆಲೆಯಲ್ಲಿ ತೀವ್ರ ಮನನೊಂದಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಚ್ಚಿನ್ ಬಳಿಯ ವೈಪಿನ್ ಞಾರಕ್ಕಲ್ ಕಳತ್ತಿಪ್ಪರಂಬಿಲ್‌ನ ಸಂಜೀವ್ (70) ಮತ್ತು ಅವರ ಪತ್ನಿ ಸಬಿತಾ (60) ಮೃತಪಟ್ಟವರು.
ನಿನ್ನೆ (ಬುಧವಾರ) ಬೆಳಿಗ್ಗೆ ಮನೆಯ ಮುಂಭಾಗದ ಕೊಠಡಿಯಲ್ಲಿ ಇಬ್ಬರೂ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮನೆಗೆ ಬರುವುದಾಗಿ ಸಂಜೀವ್ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದರು. ಬೆಳಿಗ್ಗೆ ಫೋನ್ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ನೆರೆ ಮನೆಯವರಿಗೆ ಮಾಹಿತಿ ನೀಡಲಾಯಿತು. ತ ನೆರೆಹೊರೆಯವರು ಮನೆಗೆ ತೆರಳಿ ಪರಿಶೀಲಿಸಿದಾಗ ಮೃತದೇಹಗಳು ಕಂಡುಬಂದಿವೆ. ಞಾರಕ್ಕಲ್ ಪೊಲೀಸರು ಕೇಸು ದಾಖಲಿಸಿದರು.
ಕಾನೂನು ಇಲಾಖೆಯ ಅಧಿಕಾರಿಯಾಗಿದ್ದ ಸಬಿತಾ ಕೆಲವು ವರ್ಷಗಳ ಹಿಂದಷ್ಟೇ ನಿವೃತ್ತರಾಗಿದ್ದರು. ವಿದೇಶದಲ್ಲಿದ್ದ ಸಂಜೀವ್ ಹಿಂತಿರುಗಿದ ನಂತರ ಮಞಕ್ಕಾಡ್ ಪ್ರದೇಶದಲ್ಲಿ ಮರೀನ್ ವರ್ಕ್‌ಶಾಪ್ ನಡೆಸುತ್ತಿದ್ದರು. ಇವರ ಏಕೈಕ ಮಗ ಸಿಜೋಯ್ ಅನಾರೋಗ್ಯದಿಂದ ಮೃತಪಟ್ಟಿದ್ದನು. ಅಂದಿನಿಂದ ಇಬ್ಬರೂ ತೀವ್ರ ಮಾನಸಿಕ ಖಿನ್ನತೆಯಲ್ಲಿದ್ದರೆಂದು ತಿಳಿದುಬಂದಿದೆ. ಒಂದು ವರ್ಷದ ಹಿಂದೆ ಕೈನರವನ್ನು ಕತ್ತರಿಸಿಕೊಂಡು ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ದೀರ್ಘಕಾಲದ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
