ಕುಂಬಳೆ : ನಾಪತ್ತೆಯಾದ ಮಹಿಳೆಯ ಮೃತದೇಹ ದೇವಾಲಯದ ಕೊಳದಲ್ಲಿ ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡಿನ ಕುಂಬಳೆ ಸಮೀಪದ ಮುಜಂಗಾವುನಲ್ಲಿ ನಡೆದಿದೆ.
ಮೃತರನ್ನು ಸೀತಾಂಗೋಳಿ, ಎಡನಾಡು ಬ್ಯಾಂಕ್ ಸಮೀಪದ ನಿವಾಸಿ ರಾಮಕೃಷ್ಣ ರೈ ಅವರ ಪತ್ನಿ ಎಂ. ಸುನಿತಾ (48) ಎಂದು ಗುರುತಿಸಲಾಗಿದೆ.
ನಿನ್ನೆ (ಬುಧವಾರ) ರಾತ್ರಿ ಊಟ ಮಾಡಿ ಮಲಗಿದ್ದ ಸುನಿತಾ, ಇಂದು (ಗುರುವಾ ಬೆಳಗ್ಗೆ ಮನೆಯಲ್ಲಿ ಕಾಣಿಸದಿದ್ದಾಗ ಪತಿ ರಾಮಕೃಷ್ಣ ರೈ ಅವರು ಪರಿಸರದಲ್ಲಿ ಹುಡುಕಾಟ ನಡೆಸಿದರು.ಪತ್ತೆಯಾಗದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಹುಡುಕಾಟ ಮುಂದುವರಿಸುತ್ತಿದ್ದ ವೇಳೆ ಇಂದು ಸಂಜೆ ಮುಜಂಗಾವು ದೇವಾಲಯದ ಕೊಳದಲ್ಲಿ ಮೃತದೇಹ ಪತ್ತೆಯಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಕೆ.ಪಿ. ಗಣೇಶನ್ ಅವರ ನೇತೃತ್ವದಲ್ಲಿ ಹಾಗೂ ಕಾಸರಗೋಡು ಅಗ್ನಿಶಾಮಕ ದಳದ ಲೀಡಿಂಗ್ ಫೈರ್ ಅಂಡ್ ರೆಸ್ಕ್ಯೂ ಅಧಿಕಾರಿ ಸುಕು, ಪ್ರಸೀತ್ ಮತ್ತು ಸಿಬ್ಬಂದಿಗಳಾದ ಮೊಹಮ್ಮದ್ ಸಿರಾಜ್, ಅಮಲ್ ರಾಜ್, ಶ್ರೀಜಿಷ್ ಅವರ ಸಹಾಯದಿಂದ ಮೃತದೇಹವನ್ನು ಕೊಳದಿಂದ ಮೇಲಕ್ಕೆತ್ತಲಾಯಿತು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ಸುನಿತಾ ಮತ್ತು ಅವರ ಪತಿ ರಾಮಕೃಷ್ಣ ರೈ ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. ಇವರ ಪುತ್ರ ಧನುಷ್ ಕುಮಾರ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Tags
ಕುಂಬಳೆ


