ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು 80 ಲಕ್ಷ ರೂ. ಹಣವನ್ನು (ಬಿಡುಗಡೆ ಧನ) ನೀಡಿ ವಿದೇಶಿ ಜೈಲಿನಿಂದ ಬಿಡುಗಡೆಗೊಳಿಸಿದ್ದ ಕಣ್ಣೂರು ನಿವಾಸಿ ಎಂಡಿಎಂಎ ಸಹಿತ ಸೆರೆ


 ಕಣ್ಣೂರು: ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ 80 ಲಕ್ಷ ರೂಪಾಯಿ ಮೌಲ್ಯದ ಹಣವನ್ನು (ಬಿಡುಗಡೆ ಧನ) ನೀಡಿ ವಿದೇಶಿ ಜೈಲಿನಿಂದ ಮುಕ್ತಗೊಳಿಸಿದ್ದ ಕಣ್ಣೂರು ಮೂಲದ ವ್ಯಕ್ತಿಯೊಬ್ಬ ಇದೀಗ ಮಾದಕ ದ್ರವ್ಯದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಣ್ಣೂರು ಕರಿಕ್ಕೋಟ್ಟಕರಿ ವಿಳಯಾಂಕೋಡು ಮೂಲದ ಟಿ. ಫಜಲುದ್ದೀನ್ ಎಂಬಾತನನ್ನು ಇರಿಟ್ಟಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಿಂದ ಕೇರಳಕ್ಕೆ ಭಾರಿ ಪ್ರಮಾಣದಲ್ಲಿ ಎಂಡಿಎಂಎ (MDMA) ಸಾಗಿಸುತ್ತಿದ್ದಾಗ ಈತ ಸಿಕ್ಕಿಬಿದ್ದಿದ್ದಾನೆ. ಸದ್ಯ ಈತ ಇರಿಟ್ಟಿ ಟೌನ್‌ನಲ್ಲಿ ತಟ್ಟಕಡೆ (ಸಣ್ಣ ಹೋಟೆಲ್) ನಡೆಸುತ್ತಿದ್ದ ಎನ್ನಲಾಗಿದೆ. ಕಳೆದ ತಿಂಗಳು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತನಾಗಿದ್ದ ಪಡಿಯೂರು ಮೂಲದ ಡೆನ್ನಿ ಅಬ್ರಹಾಂ ಎಂಬಾತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಫಜಲುದ್ದೀನ್ ಕುರಿತು ಪೊಲೀಸರಿಗೆ ಪ್ರಮುಖ ಸುಳಿವು ಲಭಿಸಿತ್ತು.

ಕಣ್ಣೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಗೋಯಲ್ ಅವರ ವಿಶೇಷ ಸೂಚನೆ ಮೇರೆಗೆ ಆರೋಪಿಗಳ ಫೋನ್ ಕರೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೋಧನೆ ನಡೆಸಿದಾಗ ಬಹಳ ದೊಡ್ಡ ಪ್ರಮಾಣದಲ್ಲಿ ಮೆಥಾಂಫೆಟಾಮೈನ್ (Methamphetamine) ಅನ್ನು ಕೇರಳಕ್ಕೆ ಸಾಗಿಸುತ್ತಿರುವುದು ಪತ್ತೆಯಾಗಿದೆ.

ಬಂಧಿತ ಫಜಲುದ್ದೀನ್ ತೀವ್ರ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದಾನೆ. 2023 ರಲ್ಲಿ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ವರ್ಷಗಳ ಕಾಲ ಬೆಂಗಳೂರು ಜೈಲಿನಲ್ಲಿದ್ದ ಈತ, ಇದೇ ಕಳೆದ 2026 ರ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿ ಊರಿಗೆ ಮರಳಿದ್ದನು. ಈ ಜೈಲುವಾಸದ ಅವಧಿಯಲ್ಲೇ ಈತ ದೊಡ್ಡ ಮಟ್ಟದ ಮಾದಕ ದ್ರವ್ಯ ಮಾಫಿಯಾಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು. ಊರಿಗೆ ಮರಳಿದ ನಂತರ ಇರಿಟ್ಟಿ ಟೌನ್‌ನಲ್ಲಿ ಆರಂಭಿಸಿದ ಗೂಡಂಗಡಿಯನ್ನು  ಈತ ಮಾದಕ ದ್ರವ್ಯದ ಸಗಟು ವ್ಯಾಪಾರಕ್ಕಾಗಿ ಮರೆಯಾಗಿ ಬಳಸಿಕೊಳ್ಳುತ್ತಿದ್ದನು. ಇರಿಟ್ಟಿ ಪೊಲೀಸ್ ಮತ್ತು ಜಿಲ್ಲಾ ಪೊಲೀಸರ ಡ್ಯಾನ್ಸಾಫ್ (DANSAF) ತಂಡದ ತೀವ್ರ ಕಣ್ಗಾವಲಿನ ನಂತರ ಆರೋಪಿಯನ್ನು ಬಲೆಗೆ ಬೀಳಿಸಲಾಗಿದೆ. ಫಜಲುದ್ದೀನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್‌ಗೆ ಒಪ್ಪಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು