ಕಾಸರಗೋಡು ಕನ್ನಡ ಪ್ರದೇಶಗಳಲ್ಲಿ ಕನ್ನಡ ನಮೂನೆಗಳ ವಿತರಣೆ ಹಾಗೂ ಬದಿಯಡ್ಕ ಪಂಚಾಯತ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಮನವಿ


 ನೀರ್ಚಾಲು: ಕಾಸರಗೋಡು ಜಿಲ್ಲೆಯ ಕನ್ನಡ ಭಾಷಿಕ ಪ್ರದೇಶಗಳ ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಕನ್ನಡ ಭಾಷೆಯ ಅಧಿಕೃತ ನಮೂನೆಗಳು, ಅರ್ಜಿಗಳು ಮತ್ತು ಸಾರ್ವಜನಿಕ ಸೇವಾ ದಾಖಲೆಗಳನ್ನು ಒದಗಿಸುವಂತೆ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್‌ನ ದ್ವಿತೀಯ ವಾರ್ಡ್ ವ್ಯಾಪ್ತಿಯ ಕಿಳಿಂಗಾರು–ನಿರ್ಚಾಲ್ ಮತ್ತು ಕಿಳಿಂಗಾರು–ಕಾಕುಂಜೆ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ಸ್ಥಳೀಯ ಸ್ವರಾಜ್ಯ ಇಲಾಖೆಯ ಸಚಿವರಾದ ಕೆ. ಎಂ. ಶಾಜಿ ಅವರಿಗೆ ಪ್ರಶಾಂತ್ ಕುಮಾರ್ ಶೆಟ್ಟಿ ಬೇಳ ಇವರು ಮನವಿ ಸಲ್ಲಿಸಿದರು.


ಕಾಸರಗೋಡು ಜಿಲ್ಲೆಯ ಕನ್ನಡ ಭಾಷಿಕ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದರೂ, ಅನೇಕ ಪಂಚಾಯತ್ ಕಚೇರಿಗಳಲ್ಲಿ ಕನ್ನಡ ಭಾಷೆಯ ಅರ್ಜಿ ನಮೂನೆಗಳು ಮತ್ತು ದಾಖಲೆಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಕನ್ನಡ ಭಾಷಿಕ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಕನ್ನಡ ಭಾಷೆಯ ಎಲ್ಲಾ ನಮೂನೆಗಳು ಮತ್ತು ಸೇವಾ ದಾಖಲೆಗಳನ್ನು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಇದೇ ವೇಳೆ ಬದಿಯಡ್ಕ ಗ್ರಾಮ ಪಂಚಾಯತ್‌ನ ದ್ವಿತೀಯ ವಾರ್ಡ್ ವ್ಯಾಪ್ತಿಯ ಕಿಳಿಂಗಾರು–ನಿರ್ಚಾಲ್ ಹಾಗೂ ಕಿಳಿಂಗಾರು–ಕಾಕುಂಜೆ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಮಳೆಗಾಲದಲ್ಲಿ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಮತ್ತು ರೈತರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ರಸ್ತೆಗಳನ್ನು ಶೀಘ್ರದಲ್ಲೇ ಡಾಂಬರೀಕರಣಗೊಳಿಸಿ ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ಮಂಜೂರು ಮಾಡಬೇಕೆಂದು ಇವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ವಿನಂತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು