ಅಫಘಾತದಲ್ಲಿ ಗಾಯಗೊಂಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ದಿಡೀರ್ ನಾಪತ್ತೆ; ಮರಳಿ ಬಂದ ಯುವಕ ಸಾವಿಗೆ ಶರಣು; ತನಿಖೆ ಆರಂಭಿಸಿದ ಪೊಲೀಸರು


 ಕಾಸರಗೋಡು: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ನಾಪತ್ತೆಯಾಗಿ, ಬಳಿಕ ಆಸ್ಪತ್ರೆಗೆ ಮರಳಿದ ಬೆನ್ನಿಗೆಯೇ ಮೃತಪಟ್ಟ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕುಂಬಳೆ ಕಳತ್ತೂರಿನಲ್ಲಿ ವಾಸವಾಗಿದ್ದ ಬೆಂಗಳೂರಿನ ಮೂಲದ ಅಸ್ಲಂ ಬಾಷ (39) ಮೃತಪಟ್ಟವರು. ಸಾವಿನ ಕಾರಣ ಪತ್ತೆಹಚ್ಚಲು ಕುಂಬಳೆ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ.


ಕಳೆದ ಸೆಪ್ಟೆಂಬರ್ 6, ಭಾನುವಾರ ವಾಹನ ಅಪಘಾತದಲ್ಲಿ ಗಾಯಗೊಂಡ ಅಸ್ಲಂ ಬಾಷ ಕಾಸರಗೋಡು ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಕಾಲಿಗೆ ಗಾಯವಾಗಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಯ ಮಧ್ಯೆ ಅಸ್ಲಂ ಬಾಷ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದರು.

ಈ ನಡುವೆ ಅಸ್ಲಂ ಬಾಷ ಮತ್ತೆ ಆಸ್ಪತ್ರೆಗೆ ಮರಳಿದ್ದರು. ಆಸ್ಪತ್ರೆಗೆ ಮರಳಿದ ಕೆಲವೇ ಸಮಯದ ಬಳಿಕ ನಿನ್ನೆ  (ಸೆಪ್ಟೆಂಬರ್ 7, ಸೋಮವಾರ) ಸಂಜೆ ವೇಳೆಗೆ ಅಸ್ಲಂ ಬಾಷ ಮೃತಪಟ್ಟಿದ್ದಾರೆ.

ಮರಣದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇನ್‌ಕ್ವೆಸ್ಟ್‌ (ಮರಣೋತ್ತರ ಪರಿಶೀಲನೆ) ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿನ ಕಾರಣದ ಕುರಿತು ಸ್ಪಷ್ಟತೆ ಬರಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅಸ್ಲಂ ಬಾಷ ಆಸ್ಪತ್ರೆಯಿಂದ ಹೇಗೆ ಹೊರಗೆ ಹೋದರು, ಮತ್ತೆ ಆಸ್ಪತ್ರೆಗೆ ಮರಳಿದ ಬಳಿಕ ಏನಾಯಿತು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಅಸ್ಲಂ ಬಾಷ ಕಾಸರಗೋಡಿಗೆ ಬಂದು ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಆದರೆ ಕಳೆದ ಎಂಟು ತಿಂಗಳಿನಿಂದ ಅವರು ಮನೆಗೆ ಬರುತ್ತಿರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.


ಮೃತರು ದಿವಂಗತ ಬಾಷ ಮತ್ತು ಸತ್ತಾಜಿ ದಂಪತಿಯ ಪುತ್ರ. ಪತ್ನಿ: ಅಸ. ಮಕ್ಕಳು: ಫಾತಿಮತ್ ಮಿರ್ಸ, ಮುಹಮ್ಮದ್ ಸಾಕಿರ್. ಸಹೋದರ: ಅಕ್ರಂ ಬಾಷ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು