ತ್ಯಾಜ್ಯ ಸಂಗ್ರಹಣೆಯ ವೇಳೆ ದೊರೆತ ಚಿನ್ನ ಹಾಗೂ‌ ನಗದು ಹಣವನ್ನು ಮಾಲಕರಿಗೆ ಹಿಂತಿರುಗಿಸಿ ಮಾದರಿಯಾದ ಹರಿತ ಕರ್ಮ ಸೇನೆಯ ಸದಸ್ಯೆಯರು


 ಕಾಸರಗೋಡು: ತ್ಯಾಜ್ಯ ಸಂಗ್ರಹಣೆಯ ವೇಳೆ ದೊರೆತ ಎರಡು ಪವನ್ ಚಿನ್ನದ ಸರ ಹಾಗೂ ಮೂವತ್ತು ಸಾವಿರಕ್ಕೂ ಅಧಿಕ ರೂಪಾಯಿಗಳನ್ನು ಕುಟುಂಬಕ್ಕೆ ಮರಳಿಸಿ ಹರಿತ ಕರ್ಮ ಸೇನಾ ಸದಸ್ಯರು ಮಾದರಿಯಾಗಿದ್ದಾರೆ. ಪಳ್ಳಿಕರ ಪಂಚಾಯತ್‌ನ ಹತ್ತು ಮತ್ತು ಹನ್ನೊಂದನೇ ವಾರ್ಡ್‌ಗಳ ಹರಿತ ಕರ್ಮ ಸೇನಾ ಸದಸ್ಯರು ಈ ಮಾದರಿ ಕಾರ್ಯವೆಸಗಿದ್ದಾರೆ. ಕಮಲಾ ಎನ್. ಮತ್ತು ಮಮತಾ ಅವರಿಗೆ ಪೊಯ್ನಾಚಿ, ಪರಂಬಿನ ಕೃಷ್ಣನ್ ಅವರ ಮನೆಯಿಂದ ತ್ಯಾಜ್ಯ ಸಂಗ್ರಹಿಸುವಾಗ ಚಿನ್ನ ಹಾಗೂ ಹಣ ದೊರೆತಿದೆ.

ತ್ಯಾಜ್ಯವನ್ನು ವಿಂಗಡಿಸುವ ವೇಳೆ ಹಳೆಯ ಚೀಲವೊಂದರಲ್ಲಿ ಚಿನ್ನ ಹಾಗೂ ಹಣ ಪತ್ತೆಯಾಗಿದೆ. ಕೃಷ್ಣನ್ ಅವರ ಪತ್ನಿ ಜಾನಕಿ ಇತ್ತೀಚೆಗೆ ನಿಧನರಾಗಿದ್ದರು. ಅವರು ಬಳಸುತ್ತಿದ್ದ ಸಣ್ಣ ಚೀಲವೊಂದರಲ್ಲಿ ಬಾಚಣಿಗೆ, ಪೌಡರ್ ಇತ್ಯಾದಿಗಳಿದ್ದವು. ಅದನ್ನು ತ್ಯಾಜ್ಯದೊಂದಿಗೆ ಹಾಕಲಾಗಿತ್ತು.

ಹರಿತ ಸೇನಾ ಸದಸ್ಯರು ಚೀಲವನ್ನು ತೆರೆದು ನೋಡಿದಾಗ ಕಾಗದದಲ್ಲಿ ಸುತ್ತಿದ ಪರ್ಸ್‌ನಲ್ಲಿ ಚಿನ್ನದ ಸರ ಹಾಗೂ ಮತ್ತೊಂದು ಕಾಗದದಲ್ಲಿ ಹಣವಿರುವುದು ಕಂಡುಬಂದಿದೆ. ಇಂದು (ಸೋಮವಾರ) ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಚಿನ್ನ ಹಾಗೂ ಹಣವನ್ನು ಗೃಹನಾಥನಿಗೆ ಹಸ್ತಾಂತರಿಸಲಾಯಿತು. ಹರಿತ ಸೇನಾ ಕಾರ್ಯಕರ್ತರ ಈ ಸತ್ಕಾರ್ಯಕ್ಕೆ ಕೃಷ್ಣನ್ ಹಾಗೂ ಕುಟುಂಬ ವರ್ಗದವರು ಕೃತಜ್ಞತೆ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು