ಕಾಸರಗೋಡಿನ ಶಾಲೆಯೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ 'ಫ್ರೀಡಂ ಕ್ವಿಜ್' (Freedom Quiz) ರಸಪ್ರಶ್ನೆ ಸ್ಪರ್ಧೆಯಲ್ಲಿ "ಬ್ರಿಟಿಷರಿಂದ ಅತ್ಯಂತ ಹೆಚ್ಚು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಯಾರು?" ಎಂಬ ಪ್ರಶ್ನೆಗೆ 'ವಿ.ಡಿ. ಸಾವರ್ಕರ್' ಎಂದು ಕೀ-ಉತ್ತರ ಸಿದ್ಧಪಡಿಸಲಾಗಿತ್ತು. ಇದು ರಾಜಕೀಯ ವಿವಾದಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಪ್ರಶ್ನೆ ಸಿದ್ದ ಪಡಿಸಿದ ತಂಡದಲ್ಲಿದ್ದ ಪಳ್ಳತ್ತಡ್ಕ ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಾಗಿತ್ತು.
ದೂರನ್ನು ಪರಿಶೀಲಿಸಿದ ಹೈಕೋರ್ಟ್ ಶಿಕ್ಷಕರನ್ನು ಅಮಾನತುಗೊಳಿಸಿರುವ ಕ್ರಮದ ಕುರಿತು ಕೇರಳ ಹೈಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.
ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಸಿದ್ಧಪಡಿಸಿದ್ದಕ್ಕಾಗಿ ಒಬ್ಬ ಶಿಕ್ಷಕನನ್ನು ಹೇಗೆ ಅಮಾನತುಗೊಳಿಸಲು ಸಾಧ್ಯ? ಅಮಾನತು ಎಂಬುದು ಶಿಕ್ಷೆಯ ರೂಪವಾಗಲು ಸಾಧ್ಯವೇ ಎಂದು ನ್ಯಾಯಾಲಯ ಅಧ್ಯಾಪಕರ ಅಮಾನತು ಆದೇಶವನ್ನು ಪ್ರಶ್ನಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಲುವೇನು ಎಂಬುದನ್ನು ತಿಳಿಸುವಂತೆ ಹೈಕೋರ್ಟ್ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ, ವಿವರಣೆಯನ್ನು ಕೋರಿತ್ತು. ಅದರಂತೆ ನಿನ್ನೆ ರಾಜ್ಯ ಸರಕಾರ ತನ್ನ ನಿಲುವು ತಿಳಿಸಿತ್ತು. ಆದರೆ ರಾಜ್ಯ ಸರಕಾರದ ನಿಲುವಿನಲ್ಲಿ ತೃಪ್ತರಾಗದ ನ್ಯಾಯಾಲಯವು ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಸಾವರ್ಕರ್ ರಸಪ್ರಶ್ನೆ ವಿವಾದ: ಶಿಕ್ಷಕ ಗುರುಪ್ರಸಾದ್ ಅಮಾನತಿಗೆ ಹೈಕೋರ್ಟ್ ತಡೆಯಾಜ್ಞೆ
