ಪೆರ್ಲ ನಾಲಂದ ಕಾಲೇಜಿನಲ್ಲಿ ‘ಪರಿಣಾಮಕಾರಿ ಪಾಲನೆ’ ಕುರಿತು ಪೋಷಕರಿಗೆ ಜಾಗೃತಿ ಕಾರ್ಯಕ್ರಮ


 ಪೆರ್ಲ: ನಾಲಂದ ಕಾಲೇಜು ಪೆರ್ಲದ ಭಾಷಾ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ‘ಪರಿಣಾಮಕಾರಿ ಪಾಲನೆ’ ಎಂಬ ವಿಷಯದ ಕುರಿತು ಪೋಷಕರಿಗೆ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಿತು.

        


ಕಾರ್ಯಕ್ರಮದಲ್ಲಿ ಕೇರಳ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ತರಬೇತುದಾರರಾದ ನಿರ್ಮಲ್ ಕುಮಾರ್ ಕಡಗಂ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಕ್ಕಳೊಂದಿಗೆ ಪೋಷಕರು ಬೆಳೆಸಿಕೊಳ್ಳಬೇಕಾದ ಆರೋಗ್ಯಕರ ಸಂಬಂಧ, ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮಹತ್ವ, ಆತ್ಮವಿಶ್ವಾಸ ಬೆಳೆಸುವ ವಿಧಾನಗಳು ಹಾಗೂ ಸಂತೋಷಕರ ಕುಟುಂಬ ವಾತಾವರಣ ನಿರ್ಮಾಣದ ಕುರಿತು ಮಾಹಿತಿ ನೀಡಿದರು.

                   ಮಕ್ಕಳನ್ನು ಕೇವಲ ನಿಯಂತ್ರಿಸುವುದಕ್ಕಿಂತ ಅವರ ಮಾತುಗಳನ್ನು ಆಲಿಸಿ, ಭಾವನೆಗಳನ್ನು ಗೌರವಿಸಿ, ಪ್ರೋತ್ಸಾಹಿಸುವ ಮೂಲಕ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೋಷಕರು ಸಹಕರಿಸಬೇಕು ಎಂದು ಅವರು ತಿಳಿಸಿದರು. ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪರಿಣಾಮಕಾರಿ ಪಾಲನೆಯ ಮಹತ್ವವನ್ನು ಅವರು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎ. ಮೋಹನ್ ಕುಂಟಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶಂಕರ ಖಂಡಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಯಶಸ್ಸಿಗೆ  ಐಕ್ಯೂಎಸಿ ಸಂಯೋಜಕಿ ಕು . ಮಧುಶ್ರೀ ಬಿ, ಪ್ರಾಧ್ಯಾಪಕರಾದ ಶ್ರೀಮತಿ ವಿನೀಶಾ ಎಸ್.ವಿ., ಶ್ರೀಮತಿ ಶಿಲ್ಪಾ ಪಿ. ಹಾಗೂ ಶ್ರೀಮತಿ ದಿಶಾ ಎ. ಅವರು ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.    ಮಲಯಾಳಂ ಪ್ರಾಧ್ಯಾಪಕರಾದ ಶ್ರೀಮತಿ ವಿನೀಶಾ ಎಸ್.ವಿ. ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ದಿಶಾ. ಎ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಆಯಿಷತ್ ಇಸಾನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಶಿಕ್ಷಕ ರಕ್ಷಕ ಸಂಘದ ಸದಸ್ಯರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು