ಹರಿಜಾಲ್ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ರಾಮಾಯಣ ಪಾರಾಯಣ ಹಾಗೂ ಪ್ರವಚನ

ಕಾಸರಗೋಡುಃ ಮೊಗ್ರಾಲ್ ಪುತ್ತೂರಿನ ಸಮೀಪದ ಹರಿಜಾಲ್ ಶ್ರೀ ಮಹಾವಿಷ್ಣು ದೇವಸ್ಥಾನದ ವತಿಯಿಂದ ಆಯೋಜಿಸಲಾಗಿರುವ ರಾಮಾಯಣ ಪಾರಾಯಣ ಸಪ್ತಾಹದ ಅಂಗವಾಗಿ ಆಗಸ್ಟ್ 6ರಂದು ನಿವೃತ್ತ ಡೆಪ್ಯುಟಿ ತಹಸೀಲ್ದಾರ್ ಹಾಗೂ ಖ್ಯಾತ ವಾಗ್ಮಿ, ಧಾರ್ಮಿಕ ಉಪನ್ಯಾಸಕಾರ ಶ್ರೀ ನಾರಾಯಣ ಗೋಸಾಡ ಅವರಿಂದ ರಾಮಾಯಣದ ಕಿಷ್ಕಿಂಧಾ ಕಾಂಡ ಭಾಗದ ಪಾರಾಯಣ ಹಾಗೂ ಪ್ರವಚನ ನಡೆಯಿತು. ರಾಮಾಯಣದ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಜೀವನಮೌಲ್ಯಗಳ ಕುರಿತು ಅರ್ಥಪೂರ್ಣ ಪ್ರವಚನ ನೀಡಿದರು.


ಕಿಷ್ಕಿಂಧಾ ಕಾಂಡದಲ್ಲಿ ಶ್ರೀರಾಮನಿಗೆ ಹನುಮಂತ ಹಾಗೂ ಸುಗ್ರೀವರೊಂದಿಗೆ ಉಂಟಾಗುವ ಸಂಬಂಧ, ಸೀತಾನ್ವೇಷಣೆಗೆ ಕೈಗೊಳ್ಳುವ ಪ್ರಯತ್ನ, ಹನುಮಂತನ ಭಕ್ತಿ, ಶೌರ್ಯ ಮತ್ತು ಸೇವಾ ಮನೋಭಾವ ಸೇರಿದಂತೆ ಹಲವು ಮಹತ್ವದ ಪ್ರಸಂಗಗಳು ಅಡಕವಾಗಿವೆ. ಈ ಪ್ರಸಂಗಗಳ ಮೂಲಕ ಭಕ್ತಿ, ನಿಷ್ಠೆ, ಸ್ನೇಹ, ಕರ್ತವ್ಯಪ್ರಜ್ಞೆ ಹಾಗೂ ಧರ್ಮದ ಮಹತ್ವವನ್ನು ಕೂಡಾ ವಿವರಿಸಿದರು. ರಾಮಾಯಣದ ಆದರ್ಶವನ್ನು ಇಂದಿನ ತಲೆಮಾರಿನವರು ಮೈಗೂಡಿಸಿದರೆ ಜೀವನದ ಸಂಧಿಗ್ಧ ಪರಿಸ್ಥಿತಿಗಳನ್ನು ಹೇಗೆ ಎದುರಿಸಬಹುದು ಎಂದು ಕೂಡ ಅವರು ವಿವರಿಸಿದರು.

ದೇವಸ್ಥಾನದ ಆಧ್ಯಾತ್ಮಿಕ ವಾತಾವರಣದಲ್ಲಿ ನಡೆದ ರಾಮಾಯಣ ಪಾರಾಯಣ ಹಾಗೂ ಪ್ರವಚನವು ಭಕ್ತರಲ್ಲಿ ಭಕ್ತಿಭಾವವನ್ನು ಮೂಡಿಸುವುದರ ಜೊತೆಗೆ, ರಾಮಾಯಣದ ಜೀವನದರ್ಶನವನ್ನು ಅರಿಯಲು ಉತ್ತಮ ಅವಕಾಶವಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಮಾತೃಸಮಿತಿ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದ ಅರ್ಚಕರಾದ ಶ್ರೀ ಗೋವಿ೦ದ ಕಾರಂತರು ದೀಪ ಬೆಳಗಿಸಿ ಪ್ರವಚನ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಿ.ಪಿ ಸಿ.ಆರ್.ಐ ಯ ನಿವೃತ್ತ ವಿಜ್ಞಾನಿ ಡಾ| ಮುರಳೀಧರನ್, ಕ್ಷೇತ್ರ ಟ್ರಸ್ಟಿ ಶ್ರೀ ಶಶಿಧರ ಪಂಡಿತ್ ಸ್ವಾಗತಿಸಿ, ಇನ್ನೋರ್ವ ಟ್ರಸ್ಟಿ ಶ್ರೀ ಕುಇರಾಮನ್ ನಾಯರ್ ವಂದಿಸಿದರು. ಮೇನೇಜಿಂಗ್ ಟ್ರಸ್ಟಿ ಶ್ರೀ ಉಮೇಶ್ ಕಡಪ್ಪರ, ಕಾರ್ಯದರ್ಶಿ ಶ್ರೀ ಶಿವಪ್ಪ ಗಟ್ಟಿ' ಟ್ರಸ್ಟಿ ಶ್ರೀ ಸುಂದರ ಪುರುಷ  ಮುಂತಾದವರು ಉಪಸ್ಥಿತರಿದ್ದರು.  ನಿವೃತ್ತ ಬಿ.ಡಿ.ಒ ಹಾಗೂ ಕ್ಷೇತ್ರ ಟ್ರಸ್ಟಿ ಶ್ರೀ ಬಾಲಕೃಷ್ಣ ಅವರು ಪ್ರವಚನಕಾರರನ್ನು ಶಾಲು ಹೊದಿಸಿ ಫಲಪುಷ್ಪ ಗಳನ್ನು ನೀಡಿ ಗೌರವಿಸಿದರು.


 ಸಪ್ತಾಹದ ಅಂಗವಾಗಿ ಆಗಸ್ಟ್ 3ರಿಂದ 9ರವರೆಗೆ ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಸಂಜೆ ರಾಮಾಯಣ ಪಾರಾಯಣ ಮತ್ತು ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು