ಕಣ್ಣೂರು: ರೈಲು ಪ್ರಯಾಣದ ವೇಳೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವು ಮಾಡಿದ ಪ್ರಕರಣದಲ್ಲಿ ಆರೋಪಿ ಬಂಧಿಸಲಾಗಿದೆ. ತೃಕ್ಕರಿಪ್ಪೂರು ಪಡನ್ನ ನಿವಾಸಿ ಸುಧಾಕರನ್ (56)ನನ್ನು ಆರ್‌ಪಿಎಫ್ ಮತ್ತು ರೈಲ್ವೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ.
ಫರೋಕ್‌ನಿಂದ ಕಾಸರಗೋಡಿಗೆ ಏರನಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ ₹80,000 ಮೌಲ್ಯದ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವಾಗಿತ್ತು. ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ರೈಲು ಕಣ್ಣೂರು ರೈಲು ನಿಲ್ದಾಣ ತಲುಪಿದಾಗ ಘಟನೆ ನಡೆದಿದೆ.
ವಿದ್ಯಾರ್ಥಿಯ ದೂರಿನ ಆಧಾರದ ಮೇಲೆ ರೈಲ್ವೆ ಪೊಲೀಸರು ಮತ್ತು ಆರ್‌ಪಿಎಫ್ ತನಿಖೆ ಆರಂಭಿಸಿದರು. ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಲಾಯಿತು.
ನಂತರ ನಡೆಸಿದ ತನಿಖೆಯಲ್ಲಿ ನಿನ್ನೆ ಬೆಳಗ್ಗೆ 11ರ ಸುಮಾರಿಗೆ ಕಣ್ಣೂರಿನಲ್ಲಿ ಸುಧಾಕರನ್‌ನನ್ನು ಬಂಧಿಸಲಾಯಿತು. ಕಳವು ಮಾಡಿದ್ದ ಲ್ಯಾಪ್‌ಟಾಪ್ ಸೇರಿದಂತೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರ್‌ಪಿಎಫ್ ಇನ್‌ಸ್ಪೆಕ್ಟರ್ ರಮೇಶ್ ಕುಮಾರ್, ರೈಲ್ವೆ ಎಸ್‌ಐ ಸಂತೋಷ್, ಆರ್‌ಪಿಎಫ್ ಎಎಸ್‌ಐ ಸಂಜಯ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಅಜೀಶ್, ವಿಜೇಶ್ ಹಾಗೂ ರೈಲ್ವೆ ಇಂಟೆಲಿಜೆನ್ಸ್ ಸಿಪಿಒ ಜಿತಿನ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
