ಏಳನೇ ತರಗತಿ ವಿದ್ಯಾರ್ಥಿಯ ಮೃತದೇಹ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

 


ಕಾಸರಗೋಡು:ಏಳನೇ ತರಗತಿ ವಿದ್ಯಾರ್ಥಿಯ ಮೃತದೇಹ ಕ್ವಾರ್ಟರ್ಸ್‌ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಬದಿಯಡ್ಕ, ಪೆರ್ಲ, ಬೆದ್ರಂಪಳ್ಳದ ಪ್ರಕಾಶನ್-ಸುನಿತಾ ದಂಪತಿಯ ಪುತ್ರ ಶ್ರೀಹರಿ (12) ಮೃತಪಟ್ಟ ಬಾಲಕ. ಇಂದು (ಭಾನುವಾರ) ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಪ್ರಕಾಶನ್ ಮತ್ತು ಅವರ ಕುಟುಂಬ ಮೂಲತಃ ಪತ್ತನಂತಿಟ್ಟ ಜಿಲ್ಲೆಯ ಅಡೂರ್ ನಿವಾಸಿಗಳಾಗಿದ್ದಾರೆ. ಇವರು ಬೆದ್ರಂಪಳ್ಳದ ಅಬ್ದುಲ್ಲಾ ಕುಂಞಿ ಎಂಬುವವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮೃತ ಶ್ರೀಹರಿ ಹೊರತುಪಡಿಸಿ ಈ ದಂಪತಿಗೆ ಪ್ರೀತು ಮತ್ತು ನಿಹಾರಿಕಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹೆತ್ತವರು ಅಂಗಡಿಗೆ ಸಾಮಗ್ರಿಗಳನ್ನು ಖರೀದಿಸಲು ತೆರಳಿದ್ದ ಸಮಯದಲ್ಲಿ, ಮೂರೂ ಮಕ್ಕಳು ಕ್ವಾರ್ಟರ್ಸ್‌ನೊಳಗೆ ಆಟವಾಡುತ್ತಿದ್ದರೆನ್ನಲಾಗಿದೆ.

ಪೋಷಕರು ಮರಳಿ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ತಟ್ಟಿದರೂ ಬಾಗಿಲು ತೆರೆಯದಿದ್ದಾಗ, ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದಾಗ ಶ್ರೀಹರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತದೇಹವನ್ನು ಸದ್ಯ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಮೃತ ಶ್ರೀಹರಿ ಬಣ್ಪುತ್ತಡ್ಕ ಎ.ಯು.ಪಿ ಶಾಲೆಯ ವಿದ್ಯಾರ್ಥಿಯಾಗಿದ್ದನು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು