ಕುಂಬಳೆ: ಸ್ನೇಹಿತರೊಂದಿಗೆ ಕುಳಿತು ಮಾತನಾಡುತ್ತಿದ್ದ ವೇಳೆ ತೆಂಗಿನ ಮರ ಮುರಿದು ಮೈಮೇಲೆ ಬಿದ್ದ ಪರಿಣಾಮ ವ್ಯಕ್ತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೆರ್ವಾಡ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಹಾಗೂ ಮೀನುಗಾರರಾಗಿದ್ದ ಪೆರ್ವಾಡ್ ನಿವಾಸಿ ಅಬ್ದುಲ್ಲಾ (65) ಮೃತಪಟ್ಟ ದುರ್ದೈವಿ. ಇಂದು (ಬುಧವಾರ) ಮುಂಜಾನೆ 8.30 ರ ಸುಮಾರಿಗೆ ಪೆರ್ವಾಡ್ ಪಿ.ಎಸ್. ಮೈದಾನದ ಬಳಿ ಈ ಅಪಘಾತ ಸಂಭವಿಸಿದೆ.
ಅಬ್ದುಲ್ಲಾ ಅವರು ತಮ್ಮ ಸ್ನೇಹಿತರಾದ ಇಬ್ರಾಹಿಂ ಮತ್ತು ಹಸೈನಾರ್ ಅವರೊಂದಿಗೆ ಪೆರ್ವಾಡ್ ಪಿ.ಎಸ್. ಮೈದಾನದ ಬಳಿಯ ಕಡಲತೀರದ ಮರಳಿನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಜೊತೆಯಲ್ಲಿದ್ದವರು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ಲಾ ಅವರನ್ನು ತಕ್ಷಣ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅಬ್ದುಲ್ಲಾ ಅವರ ದಾರುಣ ಸಾವು ಇಡೀ ನಾಡನ್ನು ಕಣ್ಣೀರಿಡುವಂತೆ ಮಾಡಿದೆ. ಮೃತರು
ಪತ್ನಿ ಸಕೀನಾ, ಮಕ್ಕಳಾದ ಹನೀಫಾ, ಶಂಸು, ಅಮೀರ್, ಝೈನಬಾ, ಮಿಸ್ರಿಯಾ, ಖದೀಜಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
Tags
ಕುಂಬಳೆ
