ಕೌಟುಂಬಿಕ‌ ಕಲಹ; ಪತ್ನಿಯ‌ ಕುತ್ತಿಗೆ ಸೀಳಿ ಕೊಲೆಗೈದ ಪತಿ


 ತಿರುವನಂತಪುರಂ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ. ತಿರುವನಂತಪುರಂನ ನಾಲಾಂಚಿರಾ ನಿವಾಸಿ ಹಸೀನಾ ಬೀವಿ (36) ಮೃತಪಟ್ಟ ದುರ್ದೈವಿ. ಕೊಲೆಯ ನಂತರ ಪತಿ ಸುರೇಶ್ (46) ತಲೆಮರೆಸಿಕೊಂಡಿದ್ದಾನೆ.

ಮಕ್ಕಳ ಮುಂದೆಯೇ ಸುರೇಶ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು, ಹಿರಿಯ ಮಗಳು ಈ ಘಟನೆಯ ಬಗ್ಗೆ ಮಣ್ಣಂತಲ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೊಲೆಯ ನಂತರ ಸುರೇಶ್ ಕಾರಿನಲ್ಲಿ ಹತ್ತಿ ಪರಾರಿಯಾಗಿದ್ದಾನೆ ಎಂದು ಮಗಳು ಪೊಲೀಸರಿಗೆ ತಿಳಿಸಿದ್ದಾಳೆ. ಹಸೀನಾ ಮತ್ತು ಅವರ ಕುಟುಂಬ ಕಳೆದ ನಾಲ್ಕು ತಿಂಗಳಿನಿಂದ ನಾಲಾಂಚಿರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

 ಹಸೀನಾ ಮತ್ತು ಸುರೇಶ್ ನಡುವೆ ಈ ಹಿಂದೆಯೂ ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಕುಟುಂಬಸ್ಥರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

 ಪತಿಯೊಂದಿಗಿನ ಜಗಳಕ್ಕೆ ಸಂಬಂಧಿಸಿದಂತೆ ಹಸೀನಾ ಕಳೆದ ದಿನವಷ್ಟೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

 ದೂರು ನೀಡಿ ಮನೆಗೆ ಮರಳಿದ ಬೆನ್ನಲ್ಲೇ ಮನೆಗೆ ಬಂದ ಸುರೇಶ್, ಈ ವಿಷಯವಾಗಿ ಹಸೀನಾ ಜೊತೆ ಮತ್ತೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿದಾಗ ಅಡುಗೆ ಮನೆಯಲ್ಲಿದ್ದ ತರಕಾರಿ ಹೆಚ್ಚುವ ಚಾಕು ತೆಗೆದುಕೊಂಡು ಪತ್ನಿಯ ಕುತ್ತಿಗೆ ಸೀಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು