ಕಾಸರಗೋಡು: ಕಳೆದ ವಿಧಾನಸಭಾ ಚುನಾವಣೆಯೊಂದಿಗೆ ಜನಮನದಲ್ಲಿ ಮುಖ್ಯ ಪ್ರತಿಪಕ್ಷದ ಸ್ಥಾನದಲ್ಲಿ ಬಿಜೆಪಿಯಿದೆ. ವಿಧಾನಸಭೆಯ ಒಳಗೂ ಮತ್ತು ಹೊರಗೂ ಬಿಜೆಪಿ ಶಾಸಕರು ಶಬರಿಮಲೆ ಚಿನ್ನದ ಲೂಟಿ, ಸಿಎಂಆರ್‌ಎಲ್ - ಎಕ್ಸಾಲಾಜಿಕ್ ಮಾಸಾಶನ (ತಿಂಗಳ ಹಫ್ತಾ) ಸೇರಿದಂತೆ ವಿವಿಧ ವಿಷಯಗಳನ್ನು ಮತ್ತೆ ಸಕ್ರಿಯಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಸೆಲ್ ಕೋಆರ್ಡಿನೇಟರ್ ವಿ.ಕೆ. ಸಜೀವನ್ ಹೇಳಿದ್ದಾರೆ. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದ ಅಂಗವಾಗಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಜಿಲ್ಲಾ ನಾಯಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನರೇಂದ್ರ ಮೋದಿಯವರ ನೇತೃತ್ವಕ್ಕೆ ಆಕರ್ಷಿತರಾಗಿ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿರುವವರಲ್ಲಿ ಹಾಗೂ ಬಿಜೆಪಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರಲ್ಲಿ ಬಿಜೆಪಿಯ ಸಿದ್ಧಾಂತ, ಇತಿಹಾಸ, ಕಾರ್ಯಯೋಜನೆ ಮತ್ತು ಗುರಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ಸದಸ್ಯತ್ವ ವಿತರಣೆ, ಪದಾಧಿಕಾರಿಗಳ ಆಯ್ಕೆ ಮತ್ತು ತರಬೇತಿಯನ್ನು ನಿಖರವಾಗಿ ಅನುಷ್ಠಾನಗೊಳಿಸುವ ಏಕೈಕ ರಾಜಕೀಯ ಪಕ್ಷ ಬಿಜೆಪಿ ಎಂದು ಅವರು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜ್ಯ ಮಂಡಳಿ ಸದಸ್ಯ ಶಿವಕೃಷ್ಣ ಭಟ್, ಜಿಲ್ಲಾ ಸೆಲ್ ಕೋಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.
