ಬದಿಯಡ್ಕ: ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರನಾದ ಯುವಕನನ್ನು ಇರಿದು ಕೊಲೆ ಮಾಡಲು ಬಳಸಿದ್ದ ಚಾಕುವನ್ನು ಪತ್ತೆಹಚ್ಚಲಾಗಿದೆ. ಇಂದು (ಮಂಗಳವಾರ) ಆರೋಪಿಗಳೊಂದಿಗೆ ಕರ್ನಾಟಕದ ಪುತ್ತೂರಿನ ಇರ್ದೆ ನದಿಯಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಚಾಕು ಪತ್ತೆಯಾಗಿದೆ.
ಬದಿಯಡ್ಕ ಪೊಲೀಸ್ ಇನ್ಸ್‌ಪೆಕ್ಟರ್ ಅನೂಪ್ ಕೃಷ್ಣನ್ ನೇತೃತ್ವದಲ್ಲಿ, ಆರೋಪಿಗಳಾದ ಕುಂಬಡಾಜೆ ಮೈಲತ್ತೊಟ್ಟಿಯ ಕಿರಣ್ ಹಾಗೂ ಕರುವಳತ್ತಡ್ಕದ ಅಖಿಲೇಶ್ ಅವರನ್ನು ಪುತ್ತೂರಿಗೆ ಕರೆದೊಯ್ದು ಶೋಧ ನಡೆಸಿದಾಗ, ಬತ್ತಿಹೋಗಿದ್ದ ನದಿಯಲ್ಲಿ ಚಾಕು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆ ಮೇಲೆ ಕಾಸರಗೋಡಿಗೆ ಕರೆತರಲಾದ ಆರೋಪಿಗಳನ್ನು ನ್ಯಾಯಾಲಯವು ಎರಡು ವಾರಗಳ ಕಾಲ ರಿಮಾಂಡ್‌ಗೆ ವಿಧಿಸಿದೆ.
ಮಾರ್ಪನಡ್ಕ ನಿವಾಸಿಯೂ, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಭದ್ರತಾ ಸಿಬ್ಬಂದಿ ಆಗಿದ್ದ ಸುರೇಶ್ ಬಿ.ಕೆ(42) ಅವರನ್ನು ಭಾನುವಾರ ರಾತ್ರಿ ಕೊಲೆಗೈಯ್ಯಲಾಗಿತ್ತು. ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ವಾಗ್ಯುದ್ದ ಕೊಲೆಯಲ್ಲಿ ಕೊನೆಗೊಂಡಿತ್ತು. ಕೊಲೆಗೈದ ನಂತರ ಆರೋಪಿಗಳಾದ ಕಿರಣ್(30), ಅಖಿಲೇಶ್ (25) ಎಂಬಿವರು ಪರಾರಿಯಾಗಿದ್ದು ಇವರನ್ನು ಪುತ್ತೂರಿನಿಂದ ಬಂಧಿಸಲಾಗಿತ್ತು.
Tags
ಬದಿಯಡ್ಕ


