ಕಾಸರಗೋಡು: ಉಳಿಯತ್ತಡ್ಕ-ಚೌಕಿ ರಸ್ತೆಯ ಆಜಾದ್ ನಗರದಲ್ಲಿ ಸ್ಕೂಟಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.. ನೆಕ್ರಾಜೆ ಮೂಲದ, ಪ್ರಸ್ತುತ ಚೌಕಿ ಆಜಾದ್ ನಗರದಲ್ಲಿ ವಾಸಿಸುತ್ತಿರುವ ಗಲ್ಫ್ ಉದ್ಯೋಗಿ ರಫೀಕ್ ಅವರ ಪುತ್ರ ಶಹಬಾಸ್ ಅಸ್ಸರ್ (17) ಮೃತಪಟ್ಟ ದುರ್ದೈವಿ.
ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಮತ್ತೊಬ್ಬ ಸಹಪ್ರಯಾಣಿಕ ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಸೇರಿದಂತೆ ಒಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಮತ್ತು ಇಂದಿರಾನಗರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ನಿನ್ನೆ (ಸೋಮವಾರ) ರಾತ್ರಿ ಸುಮಾರು 10.45 ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಮೃತ ಶಹಬಾಸ್ ಅಸ್ಸರ್ ಅವರು ರಫೀಕ್-ಅಲ್ಫೀನಾ ದಂಪತಿಯ ಏಕೈಕ ಪುತ್ರನಾಗಿದ್ದಾರೆ. ಇವರು ವಿದ್ಯಾನಗರ ಉದಯಗಿರಿಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು. ಪ್ಲಸ್ ಒನ್ ಮುಗಿಸಿ, ಪ್ಲಸ್ ಟು ತರಗತಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘೋರ ದುರಂತ ಸಂಭವಿಸಿದೆ. ಪೊಲೀಸರು ಕೇಸು ದಾಖಲಿಸಿದರು.
