ಪೈವಳಿಕೆ: ವಿಶ್ವ ಆಹಾರ ದಿನಾಚರಣೆಯ ಅಂಗವಾಗಿ ಜಿ.ಎಚ್.ಎಸ್.ಎಸ್. ಪೈವಳಿಕೆ ಕಾಯರ್ ಕಟ್ಟೆ ಶಾಲೆಯಲ್ಲಿ ಆಯೋಜಿಸಿದ ಆಹಾರ ಮೇಳ ಗಮನಸೆಳೆಯಿತು. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಯಾರಿಸಿದ ವಿವಿಧ ಬಗೆಯ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ತಿನಿಸುಗಳನ್ನು ಶಾಲೆಗೆ ತಂದು ಪ್ರದರ್ಶಿಸಿ, ಪರಸ್ಪರ ಹಂಚಿಕೊಂಡು ಸವಿದರು.
ಹಣ್ಣು-ಹಂಪಲುಗಳಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾಗ್ಯಲಕ್ಷ್ಮೀ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ. ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳಿಗೆ ಆದ್ಯತೆ ನೀಡುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಯಬೇಕು. ಆಹಾರದ ವೈವಿಧ್ಯತೆಯನ್ನು ಪರಿಚಯಿಸಿಕೊಳ್ಳುವುದರ ಜೊತೆಗೆ, ಆಹಾರವನ್ನು ವ್ಯರ್ಥ ಮಾಡದ ಜವಾಬ್ದಾರಿಯನ್ನೂ ರೂಢಿಸಿಕೊಳ್ಳಬೇಕು. ವಿಶ್ವ ಆಹಾರ ದಿನವು ಪ್ರತಿಯೊಬ್ಬರಿಗೂ ಸಮರ್ಪಕ ಹಾಗೂ ಪೌಷ್ಟಿಕ ಆಹಾರ ದೊರೆಯಬೇಕೆಂಬ ಸಂದೇಶವನ್ನು ಸಾರುತ್ತದೆ” ಎಂದು ಹೇಳಿದರು.
ಸೀನಿಯರ್ ಅಸಿಸ್ಟೆಂಟ್ ಉದಯ ಕೆ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸ್ಟಾಫ್ ಸೆಕ್ರೆಟರಿ ಅಶೋಕ್ ಮರ್ತ್ಯ ಸ್ವಾಗತಿಸಿದರು. ಶಿಕ್ಷಕಿ ಸಪ್ತಮಿ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Tags
ಉಪ್ಪಳ

