ಕಾಸರಗೋಡು: ಕಾರು ಡಿವೈಡರ್ಗೆ ಡಿಕ್ಕಿಹೊಡೆದಿದ್ದು. ಇದರ ಬೆನ್ನಲ್ಲೇ ಹಿಂದಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿಹೊಡೆದಿದೆ. ಅನಂತರ ಕೊಲ್ಲೂರಿಗೆ ತೆರಳುತ್ತಿದ್ದ ಬಸ್ ಲಾರಿಗೆ ಡಿಕ್ಕಿಹೊಡೆದಿದೆ. ಬಸ್ಸಿನ ಗ್ಲಾಸ್ ಪುಡಿಯಾಗಿ ಚೂರುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದವು.
ಆ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಬಂದ ದ್ವಿಚಕ್ರ ವಾಹನವು ನಿಲ್ಲಿಸಲು ಪ್ರಯತ್ನಿಸುವಾಗ ನಿಯಂತ್ರಣ ತಪ್ಪಿ ಗಾಜಿನ ಚೂರುಗಳ ಮೇಲೆ ಮಗುಚಿಬಿದ್ದಿದ್ದು, ಸವಾರನೊಬ್ಬ ಗಾಯಗೊಂಡಿದ್ದಾನೆ. ಇಂದು (ಶುಕ್ರವಾರ) ನಸುಕಿನ ಜಾವ 2.30ಕ್ಕೆ ಮೊಗ್ರಾರ್ ಪುತ್ತೂರು ಪಂಚಾಯತ್ ಕಚೇರಿ ಎದುರು ಈ ಸರಣಿ ಅಪಘಾತ ಸಂಭವಿಸಿದೆ.
ಕಾಸರಗೋಡು ಅಗ್ನಿಶಾಮಕ ದಳದಿಂದ ಆಕ್ಸಿಡೆಂಟ್ ರೆಸ್ಕ್ಯೂ ಟೆಂಡರ್ ವಾಹನ ಹಾಗೂ ಮತ್ತೊಂದು ಯುನಿಟ್ ಆಗಮಿಸಿ ನೀರು ಹಾಯಿಸುವ ಮೂಲಕ ರಸ್ತೆಯಲ್ಲಿ ಬಿದ್ದಿದ್ದ ಗಾಜಿನ ಚೂರುಗಳನ್ನು ತೆರವುಗೊಳಿಸಿದೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಮುಂಭಾಗದ ಬಾಗಿಲಿನ ಮೂಲಕ ಹೊರಬರಲು ಸಾಧ್ಯವಾಗದ ಕಾರಣ, ಅಗ್ನಿಶಾಮಕ ದಳದ ಏಣಿಯನ್ನು ಬಳಸಿ ತುರ್ತು ನಿರ್ಗಮನ ಬಾಗಿಲಿನ (ಎಮರ್ಜೆನ್ಸಿ ಡೋರ್) ಮೂಲಕ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಸುಕು ವರ್ಗೀಸ್, ಸಿಬ್ಬಂದಿಗಳಾದ ವೈಶಾಖ್ ಎಂ.ಎ, ಸಿರಾಜುದ್ದೀನ್ ಪಿ.ಸಿ, ರಮೇಶ್, ಪ್ರಣವ್, ಹರಿಕುಮಾರ್, ಒ.ಕೆ. ಪ್ರಜಿತ್, ಆನಂದು ಜೆ ಹಾಗೂ ಹೋಂಗಾರ್ಡ್ಗಳಾದ ರಾಜೇಂದ್ರನ್ ಎ, ಸುಭಾಷ್ ಸಿ.ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


