ತಂದೆ ಹಿಂದಕ್ಕೆ ಚಲಾಯಿಸಿದ ಕಾರಿನಡಿಯಲ್ಲಿ ಸಿಲುಕಿ ಒಂದೂವರೆ ವರ್ಷ ಪ್ರಾಯದ ಪುತ್ರಿ ಮೃತ್ಯು


 ಕಣ್ಣೂರು: ಕಾರನ್ನು  ಹಿಂದಕ್ಕೆ ತೆಗೆಯುವ ವೇಳೆ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಹೆಣ್ಣು ಮಗು ದುರಂತವಾಗಿ ಮೃತಪಟ್ಟ ದಾರುಣ ಘಟನೆ  ಕಣ್ಣೂರಿನ ತಯ್ಯಿಲ್ ಎಂಬಲ್ಲಿ  ನಡೆದಿದೆ. ತಯ್ಯಿಲ್ ಕುರುವ ರಸ್ತೆ ಸಮೀಪದ ಸೈನ್ ಹೌಸ್ ನಿವಾಸಿ ಹೂರಿನ್ ಮೆಹಬೂಬಿ ಮೃತಪಟ್ಟ ಮಗು. ನಿನ್ನೆ (ಶುಕ್ರವಾರ) ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಮನೆಯ ಅಂಗಳದಲ್ಲಿ ಕಾರನ್ನು ತಿರುಗಿಸಲು ಯತ್ನಿಸುತ್ತಿದ್ದಾಗ ಮಗು ಕಾರಿನ ಹತ್ತಿರ ಬಂದಿದೆ. ಆದರೆ ಇದನ್ನು ತಂದೆ ಗಮನಿಸಿರಲಿಲ್ಲ. ತಂದೆ ಕಾರನ್ನು ಹಿಂದಕ್ಕೆ ತೆಗೆದಾಗ ಮಗು ಅದರ ಅಡಿಗೆ ಸಿಲುಕಿದೆ. ಗಂಭೀರವಾಗಿ ಗಾಯಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.
ಘಟನೆಗೆ ಸಂಬಂಧಿಸಿದಂತೆ ಮಗುವಿನ ತಂದೆ ಶಫ್ವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಆರೋಪದ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ. ಮೃತ ಮಗುವಿನ ತಾಯಿ ಅರಕ್ಕಕತ್ ಶಹಮಾ ಮತ್ತು ಸಹೋದರಿ ಹೈಸ್ಲಿನ್. ಮಗುವಿನ ಅಂತ್ಯಸಂಸ್ಕಾರವನ್ನು (ದಫನ್) ಸಂಜೆ ನೆರವೇರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು