ಕಾಸರಗೋಡು: ರೈಲು ಪ್ರಯಾಣದ ವೇಳೆ ವಿದ್ಯಾರ್ಥಿಯ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವುಗೈದ ಆರೋಪಿಯನ್ನು ಬಂಧಿಸಲಾಗಿದೆ. ಮಲಪ್ಪುರಂ, ಕುಣಿಯೇರಿ, ಕಾವುಪುರಂ ನಿವಾಸಿ ಮೊಹಮ್ಮದ್ ಜಾಬಿರ್ (38) ಎಂಬಾತನನ್ನು ಕಾಸರಗೋಡು ರೈಲ್ವೆ ಪೊಲೀಸರು ಹಾಗೂ ಆರ್‌ಪಿಎಫ್ ಸಿಬ್ಬಂದಿ ಜಂಟಿಯಾಗಿ ಬಂಧಿಸಿದ್ದಾರೆ.
ಪಾಲಕ್ಕಾಡ್, ಪಟ್ಟಾಂಬಿ ನಿವಾಸಿ ಹಾಗೂ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಟಿ.ಪಿ. ವಿಷ್ಣುದತ್ ಅವರ ಲ್ಯಾಪ್‌ಟಾಪ್ ಕಳವು ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಆಗಸ್ಟ್ 22ರಂದು ಘಟನೆ ನಡೆದಿತ್ತು. ವಿಷ್ಣುದತ್ ಮಂಗಳೂರಿಗೆ ತೆರಳುತ್ತಿದ್ದ ಪರಶುರಾಮ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಕಾಸರಗೋಡಿಗೆ ತಲುಪಿದಾಗ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳುವಾಗಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಕಾಸರಗೋಡು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ಎಸ್‌ಐ ಸನಿಲ್ ಕುಮಾರ್ ಹಾಗೂ ಎಎಸ್‌ಐ ಸಿ.ಕೆ. ಮಹೇಶ್ ಅವರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಕಳ್ಳನನ್ನು ಪತ್ತೆಹಚ್ಚಿ ಬಂಧಿಸಲಾಯಿತು.
ಆರ್‌ಪಿಎಫ್‌ನ ಕೆ.ಎಂ. ಶೈಜು, ಬೈಜು, ವಿಜೇಶ್, ಶ್ರೀನಾಥ್, ಪ್ರಕಾಶ್ ಅವರೂ ಪೊಲೀಸ್ ತಂಡದಲ್ಲಿದ್ದರು.
