ಬದಿಯಡ್ಕ: ಚೆರ್ಕಳ-ಕಲ್ಲಡ್ಕ ರಸ್ತೆಯ ಶೋಚನೀಯ ಸ್ಥಿತಿಯನ್ನು ತುರ್ತಾಗಿ ಪರಿಹರಿಸಬೇಕೆಂದು ಆಗ್ರಹಿಸಿ ಬದಿಯಡ್ಕ ವಲಯ ಫ್ರೈಡ್ ಬಸ್ ಯೂನಿಯನ್ ಕಾರ್ಮಿಕ ಸಂಘದ ಅಧ್ಯಕ್ಷ ಹಾರಿಸ್ ಅವರು ಬಿ.ಡಿ.ಕೆ. ಶಾಸಕರಿಗೆ ಮನವಿ ಸಲ್ಲಿಸಿದರು.
ಬಚೆರ್ಕಳದಿಂದ ಉಕ್ಕಿನಡ್ಕದವರೆಗೆ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿದೆ. ರಸ್ತೆಯ ದುರಸ್ತಿ ಕಾಮಗಾರಿಗಳನ್ನು ಕೂಡ ಸಮರ್ಪಕವಾಗಿ ನಡೆಸದ ಕಾರಣ ಹಲವಾರು ವಾಹನಗಳು ಅಪಘಾತಕ್ಕೀಡಾಗುವುದು ನಿತ್ಯದ ಘಟನೆಯಾಗಿ ಪರಿಣಮಿಸಿದೆ ಎಂದು ಸಂಘಟನೆ ತಿಳಿಸಿದೆ.
ಚೆರ್ಕಳದಿಂದ ಉಕ್ಕಿನಡ್ಕದವರೆಗಿನ ರಸ್ತೆಯಲ್ಲಿರುವ ಗುಂಡಿಗಳನ್ನು ತಕ್ಷಣ ಮುಚ್ಚಿ ಪ್ರಯಾಣಿಕರು ಹಾಗೂ ವಾಹನ ಸವಾರರು ಎದುರಿಸುತ್ತಿರುವ ಅಪಾಯವನ್ನು ತಪ್ಪಿಸಬೇಕು. ಅಲ್ಲದೆ, ರಸ್ತೆಗೆ ಆದಷ್ಟು ಬೇಗ ಮೆಕಾಡಂ ಟಾರಿಂಗ್ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನಾ ಕಾರ್ಯಕ್ರಮಗಳೊಂದಿಗೆ ಮುಂದುವರಿಯುವುದಾಗಿ ಸಂಘಟನೆ ಶಾಸಕರಿಗೆ ತಿಳಿಸಿದೆ.
