ಪಾತ್ರೆ ತೊಳೆಯುವ ಮಧ್ಯೆ ನದಿಯ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ಮಹಿಳೆಯ ಮೃತದೇಹ ಪತ್ತೆ


 ಕಾಞಂಗಾಡು: ನೀಲೇಶ್ವರದ ಕಣಿಚಿರೆ ನದಿಯಲ್ಲಿ ಪಾತ್ರೆ ತೊಳೆಯುವ ಮಧ್ಯೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ  ಮಹಿಳೆಯ  ಮೃತದೇಹ  ಪತ್ತೆಯಾಗಿದೆ. ಕಣಿಚಿರೆ ಆಟೋರಿಕ್ಷಾ ಚಾಲಕ ಸಜೀಶ್ ಎಂಬವರ ಪತ್ನಿ ಕೆ. ನದಿ (51) ಮೃತಪಟ್ಟವರು. ಇಂದು (ಬುದವಾರ) ಬೆಳಗ್ಗೆ ಈ ಘಟನೆ ನಡೆದಿದೆ.

ಇಂದು   ಬೆಳಿಗ್ಗೆ ಸುಮಾರು ಆರು ಗಂಟೆಯ ವೇಳೆಗೆ ಮನೆಯ ಸಮೀಪವಿರುವ ನದಿಗೆ ಪಾತ್ರೆ ತೊಳೆಯಲು ಇವರು ತೆರಳಿದ್ದರು. ಬಹಳ ಸಮಯ ಕಳೆದರೂ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ, ನದಿಯ ದಡದಲ್ಲಿ ಅವರ ಚಪ್ಪಲಿ, ಬಕೆಟು ಮತ್ತು ಪಾತ್ರೆಗಳು ಪತ್ತೆಯಾಗಿವೆ.

ನಂತರ ಕಾಞಂಗಾಡ್ ಅಗ್ನಿಶಾಮಕ ದಳ, ಸ್ಕೂಬಾ ತಂಡ ಹಾಗೂ ಸ್ಥಳೀಯರ ನೇತೃತ್ವದಲ್ಲಿ ನಡೆದ ಶೋಧ ಕಾರ್ಯದ ಬಳಿಕ,  11 ಗಂಟೆಯ ಸುಮಾರಿಗೆ ಕಡಿದಿಮೂಲ ಸೇತುವೆಯ ಸಮೀಪ ಮೃತದೇಹವನ್ನು ಪತ್ತೆ ಹಚ್ಚಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮನೆಯ ಸಮೀಪವಿರುವ ಈ ನದಿಗೆ ಇವರು ನಿತ್ಯವೂ ಪಾತ್ರೆ ತೊಳೆಯಲು ತೆರಳುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದು ಈ ದುರ್ಘಟನೆ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ನದಿಯ ದಡದಲ್ಲಿ ಗೃಹಿಣಿಯ ಚಪ್ಪಲಿ, ಬಕೆಟು ಮತ್ತು ಪಾತ್ರೆಗಳು ದೊರೆತ ಹಿನ್ನೆಲೆಯಲ್ಲಿ ಅವರು ನದಿಗೆ ಬಿದ್ದಿರಬಹುದು ಎಂಬ ಶಂಕೆ ಬಲಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು