ವರ್ಕಾಡಿ: ಕಾಸರಗೋಡು ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾಗುತ್ತಿರುವ ಹಿಂದೂ ಸಮುದಾಯಕ್ಕೆ ಅಂತಿಮ ಸಂಸ್ಕಾರ ವಿಧಿವಿಧಾನಗಳನ್ನು ನೆರವೇರಿಸಲು ಕೂಡ ಸ್ಥಳ ಮತ್ತು ಹಕ್ಕುಗಳನ್ನು ನಿರಾಕರಿಸಲಾಗುತ್ತಿರುವ ಪರಿಸ್ಥಿತಿ ಇದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಹೇಳಿದರು. ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿಯು ವೋರ್ಕಾಡಿ ಗ್ರಾಮ ಪಂಚಾಯತ್ ಕಚೇರಿಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ವಿವಿಧ ಪಂಚಾಯತ್ ಆಡಳಿತ ಮಂಡಳಿಗಳು ತೀವ್ರ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಅವರು ಆರೋಪಿಸಿದರು. ಹಲವು ಕಡೆಗಳಲ್ಲಿ ಸಾರ್ವಜನಿಕ ಸ್ಮಶಾನಗಳು ವ್ಯಾಪಕವಾಗಿ ಒತ್ತುವರಿಯಾಗುತ್ತಿದ್ದು, ಕುಂಜತ್ತೂರು ಮಾಡ ಹಾಗೂ ವರ್ಕಾಡಿಯ ಘಟನೆಗಳೇ ಇದಕ್ಕೆ ಉದಾಹರಣೆ ಎಂದು ಅವರು ಬೆಟ್ಟು ಮಾಡಿದರು. ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರವೀಶ ತಂತ್ರಿ ಆಗ್ರಹಿಸಿದರು.
ಬಿಜೆಪಿ ವರ್ಕಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಭಾಸ್ಕರ್ ಪೊಯ್ಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ಚಂದ್ರ ಮಂಜೇಶ್ವರಂ, ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ., ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂಚಾಯತು ಪ್ರಧಾನ ಕಾರ್ಯದರ್ಶಿ ನಾಗೇಶ್ ಬಳ್ಳೂರು, ಹಿರಿಯ ನಾಯಕ ಧೂಮಪ್ಪ ಶೆಟ್ಟಿ, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ವಿವೇಕಾನಂದ ಶೆಟ್ಟಿ, ರಕ್ಷಣ್, ಜನಪ್ರತಿನಿಧಿಗಳಾದ ತುಳಸಿ ಕುಮಾರಿ, ಚಂದ್ರಶೇಖರ, ಜಗದೀಶ್ ಚೇಂಡೇಲ್, ಕಾರ್ತೀಶ್, ಸುಖಿರಾಜ್ ಶೆಟ್ಟಿ, ಸಂಪತ್, ಕೃಷ್ಣಮೂರ್ತಿ ನೂಜಿ, ಸುರೇಶ್ ಶೆಟ್ಟಿ ಸೊಡಂಕೂರು ಮಾತನಾಡಿದರು.
ಮಜೀರ್ಪಳ್ಳ ಜಂಕ್ಷನ್‌ನಿಂದ ಆರಂಭವಾದ ಪ್ರತಿಭಟನಾ ಮಾರ್ಚ್ ಅನ್ನು ವೊರ್ಕಾಡಿ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಪೊಲೀಸರು ತಡೆದರು. ಪ್ರತಿಭಟನಾ ಮಾರ್ಚ್‌ನಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
