ಕೊಚ್ಚಿ:ಖಾಸಗಿ ಅಂಗದಲ್ಲಿ ಮುಟ್ಟಿನ ಕಪ್ (Menstrual Cup) ಒಳಗೆ ಬಾಂಚಿಟ್ಟು ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಜೊತೆಗೆ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಅಬಕಾರಿ ಸಿಬ್ಬಂದಿ ಬಂಧಿಸಿದ್ದಾರೆ. ಆಲಪ್ಪುಳ ತೃಕ್ಕುನ್ನಪ್ಪುಳ ಕೊಟ್ಟೇಮುರಿ ಪಾಂಡಿಕಶಾಲೆಯ ಮುಹಮ್ಮದ್ ಶಾಫಿ (29) ಮತ್ತು ಆಲಪ್ಪುಳದ ಸರಿತಾ (30) ಬಂಧಿತರು. ಇವರಿಂದ 94.032 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಿಂದ ಎಂಡಿಎಂಎ ತಂದು ಎರ್ನಾಕುಲಂ ಮತ್ತು ಆಲಪ್ಪುಳ ತಲುಪಿಸಿ, ಲಾಡ್ಜ್‌ಗಳನ್ನು ಕೇಂದ್ರೀಕರಿಸಿ ಇವರು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರೆಂದು ಅಬಕಾರಿ ತಂಡ ತಿಳಿಸಿದೆ. ಎರ್ನಾಕುಲಂ ಸೌತ್‌ನ ಲಾಡ್ಜ್ ಒಂದರಿಂದ 65.27 ಗ್ರಾಂ ಎಂಡಿಎಂಎ ಯೊಂದಿಗೆ ಮುಹಮ್ಮದ್ ಶಾಫಿಯನ್ನು ಅಬಕಾರಿ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ದೀರ್ಘಕಾಲದಿಂದ ಎಂಡಿಎಂಎ ವ್ಯಾಪಾರಿಗಳಾಗಿರುವ ಇವರ ಮೇಲೆ ಅಬಕಾರಿ ತಂಡ ನಿಗಾ ಇರಿಸಿತ್ತು
ತಿಂಗಳ ಹಿಂದೆ ಇದೇ ತಂಡವನ್ನು ತಪಾಸಣೆ ನಡೆಸಲಾಯಿತಾದರೂ ಅಂದು ಮುಹಮ್ಮದ್ ಶಾಫಿ ಎಂಡಿಎಂಎ ಎಸೆದು ಪರಾರಿಯಾಗಿದ್ದನು. ಸರಿತಾ ಎಂಡಿಎಂಎ ಅನ್ನು ಮುಟ್ಟಿನ ಕಪ್‌ನಲ್ಲಿ (Menstrual Cup) ಬಾಂಚಿಟ್ಟು ಖಾಸಗಿ ಅಂಗದಲ್ಲಿ ಅಡಗಿಸಿಟ್ಟುಕೊಂಡಿದ್ದಳು. ಅಂದು ನಡೆದ ಅಬಕಾರಿ ತಪಾಸಣೆಯಿಂದ ಸರಿತಾ ಪಾರಾಗಿದ್ದರು. ಆ ನಂತರ ಎಂಡಿಎಂಎ ಸಾಗಾಟಕ್ಕೆ ಸರಿತಾ ಇದೇ ಮಾರ್ಗವನ್ನು ನಿಯಮಿತವಾಗಿ ಅನುಸರಿಸುತ್ತಿದ್ದರೆನ್ನಲಾಗಿದೆ.
ಎರ್ನಾಕುಲಂನ ಲಾಡ್ಜ್ ಕೊಠಡಿಯಲ್ಲಿ ಎಂಡಿಎಂಎ ಜೊತೆಗೆ ಮುಹಮ್ಮದ್ ಶಾಫಿ ಅಬಕಾರಿ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದ ಸಮಯದಲ್ಲಿ ಸರಿತಾ ಆಲಪ್ಪುಳದಲ್ಲಿ ಎಂಡಿಎಂಎ ಮಾರಾಟದಲ್ಲಿದ್ದರು. ಶಾಫಿ ಬಂಧನಕ್ಕೊಳಗಾದ ವಿಚಾರ ತಿಳಿಯದೆ ಎರ್ನಾಕುಲಂಗೆ ಹಿಂತಿರುಗಿದ ಸರಿತಾರನ್ನು ರಾತ್ರಿ ಅಬಕಾರಿ ತಂಡ ವಶಕ್ಕೆ ಪಡೆಯಿತು.
ವಿಚಾರಣೆ ವೇಳೆ ಸರಿತಾ ನೀಡಿದ ಮಾಹಿತಿಯ ಆಧಾರದ ಮೇಲೆ ಆಲಪ್ಪುಳದ ಮನೆಯೊಂದರಿಂದ ಹೆಚ್ಚುವರಿ 28.76 ಗ್ರಾಂ ಎಂಡಿಎಂಎ ಅನ್ನು ಅಬಕಾರಿ ಪಡೆ ವಶಪಡಿಸಿಕೊಂಡಿದೆ. ಇವರಿಂದ ಒಟ್ಟು 94.032 ಗ್ರಾಂ ಎಂಡಿಎಂಎ, ಒಂದು ಮೊಬೈಲ್ ಹಾಗೂ 17,700 ರೂಪಾಯಿ ನಗದನ್ನು ಅಬಕಾರಿ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
