ಯುವತಿಯ ರಕ್ತಸಿಕ್ತ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ತನಂತಿಟ್ಟ ಅಡೂರು ಕೋಟಮುಕಲ್ ನಿವಾಸಿ ಶೆಹನಾ (31) ಮೃತಪಟ್ಟ ಯುವತಿ. ಈಕೆಯ ಮೃತದೇಹ ಮನೆಯ ಮೆಟ್ಟಿಲಿನ ಬಳಿ ಶಾಲ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿದ್ದ ಆಕೆಯ ಪುರುಷ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೋಮವಾರ ರಾತ್ರಿ 7 ಗಂಟೆಯ ಸುಮಾರಿಗೆ ಶೆಹನಾ ಅವರ ಮನೆಯಿಂದ ಜೋರಾಗಿ ಗದ್ದಲ ಮತ್ತು ಕಿರುಚಾಟ ಕೇಳಿಬಂದಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ತಕ್ಷಣವೇ ಅಡೂರ್ ನಗರಸಭೆ ಕೌನ್ಸಿಲರ್‌ಗೆ ಮಾಹಿತಿ ನೀಡಿದ್ದಾರೆ. ಕೌನ್ಸಿಲರ್ ಮತ್ತು ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ, ಮನೆಯೊಳಗಿದ್ದ ಯುವಕನಿಗೆ ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾರೆ. ಬಾಗಿಲು ತೆರೆದು ಒಳಗೆ ಹೋದಾಗ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯರು ತಕ್ಷಣವೇ ಅಡೂರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೆಯಲ್ಲಿದ್ದ ಏಳಂಕುಳಂ ನಿವಾಸಿಯಾದ ಆಕೆಯ ಸ್ನೇಹಿತನನ್ನು ವಶಕ್ಕೆ ಪಡೆದಿದ್ದಾರೆ. ಮೃತ ಶೆಹನಾ ತನ್ನ ಪತಿಯಿಂದ ದೂರ ಸರಿದು ಒಂಟಿಯಾಗಿ ವಾಸಿಸುತ್ತಿದ್ದಳು ಎಂದು ತಿಳಿದುಬಂದಿದೆ.
ದೇಹದ ಮೇಲೆ ರಕ್ತದ ಕಲೆಗಳು: ಕೊಲೆ ಶಂಕೆ?
ಮೃತಪಟ್ಟ ಶೆಹನಾ ಹಾಗೂ ಸದ್ಯಕಸ್ಟಡಿಯಲ್ಲಿರುವ ಯುವಕ ಇಬ್ಬರ ದೇಹದ ಮೇಲೂ ಗಾಯದ ಗುರುತುಗಳು ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಇದೊಂದು ಸಂಶಯಾಸ್ಪದ ಸಾವಾಗಿದ್ದು, ಘಟನೆಯಲ್ಲಿ ತೀವ್ರ ರಹಸ್ಯ ಅಡಗಿದೆ. ವೈಜ್ಞಾನಿಕ ತನಿಖೆ ಮತ್ತು ಶವಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಖರ ಮಾಹಿತಿ ಹೊರಬರಲಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
