ಬೇಡಿಕೆ ಈಡೇರಿಕೆಗಾಗಿ ಪಾಣಕ್ಕಾಡ್ ತಙಳ್ ರನ್ನು ಬೇಟಿಯಾಗಿ ಮನವಿ ಸಲ್ಲಿಸಿದ ದೇವಸ್ವಂ ನೌಕರರು


 ಮಲಪ್ಪುರಂ: ಮಲಬಾರ್ ದೇವಸ್ವಂ ಮಂಡಳಿ (Malabar Devaswom Board) ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕೇರಳ ಸ್ಟೇಟ್ ಟೆಂಪಲ್ ಎಂಪ್ಲಾಯೀಸ್ ಕೋ-ಆರ್ಡಿನೇಷನ್ ಕಮಿಟಿಯ (Kerala State Temple Employees Coordination Committee) ಮುಖಂಡರು, ಮಲಬಾರ್ ದೇವಸ್ವಂ ಮಂಡಳಿಯ ಸಮಸ್ಯೆಗಳಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಅವರಿಗೆ ಮನವಿ ಪತ್ರ ಹಸ್ತಾಂತರಿಸಿದರು. ಕಳೆದ 31 ವರ್ಷಗಳಿಂದ ಬಾಕಿ ಉಳಿದಿರುವ 'ಮಲಬಾರ್ ದೇವಸ್ವಂ ಮಂಡಳಿ ಬಿಲ್' ಅನ್ನು ಕಾನೂನಾಗಿ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ ಎಂದು ವರದಿಯಾಗಿದೆ.

ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ಎರಡು ಅವಧಿಯ ಎಲ್‌ಡಿಎಫ್ (LDF) ಸರ್ಕಾರಗಳನ್ನೂ ಸಂಘಟನೆಯ ನೇತೃತ್ವದಲ್ಲಿ ಸಂಪರ್ಕಿಸಲಾಗಿತ್ತು ಎಂದು ನೌಕರರು ಹೇಳಿದ್ದಾರೆ. ಪ್ರಸ್ತುತ ದೇವಸ್ವಂ ಸಚಿವ ಕೆ. ಮುರಳೀಧರನ್ ಮತ್ತು ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರಿಗೂ ತಮ್ಮ ಬೇಡಿಕೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದ್ದರೂ, ಇದುವರೆಗೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಎಂದು ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪಾಣಕ್ಕಾಡ್ ಸಯ್ಯದ್ ಸಾದಿಕಲಿ ಶಿಹಾಬ್ ತಂಙಳ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಇದೇ ಬೇಡಿಕೆಯನ್ನು ಉಲ್ಲೇಖಿಸಿ ಯುಡಿಎಫ್ (UDF) ಮೈತ್ರಿಕೂಟದ ಇತರ ಪಕ್ಷಗಳ ನಾಯಕರನ್ನೂ ಭೇಟಿ ಮಾಡಲು ಯೋಜಿಸಿರುವುದಾಗಿ ಕೇರಳ ಸ್ಟೇಟ್ ಟೆಂಪಲ್ ಎಂಪ್ಲಾಯೀಸ್ ಕೋ-ಆರ್ಡಿನೇಷನ್ ಕಮಿಟಿ ನಾಯಕರು ತಿಳಿಸಿದ್ದಾರೆ.

ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮುಸ್ಲಿಂ ಲೀಗ್ ನಾಯಕ ಹಾಗೂ ಮಾಜಿ ಶಾಸಕ ಕೆ.ಎನ್.ಎ. ಖಾದರ್ ಅವರು ದೇವಸ್ವಂ ಮಂಡಳಿ ನೌಕರರ ಜೊತೆಯಲ್ಲಿದ್ದರು.

ಸಂಘಟನೆಯ ಪ್ರಮುಖರಾದ ಅಧ್ಯಕ್ಷ ವಿ.ವಿ. ಶ್ರೀನಿವಾಸನ್, ಎಂ.ವಿ. ಶಶಿ, ಶ್ರೀಜಿಶ್ ಕೆ.ಪಿ., ಕೇಶವನ್ ನಂಬೀಶನ್ ಹಾಗೂ ಗಿರಿಧರನ್ ರಾಮನಾಟ್ಟುಕರ ಮುಂತಾದವರು ಮನವಿ ಸಲ್ಲಿಸುವ ನಿಯೋಗದಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು