ಕಾಸರಗೋಡು: ರಾಷ್ಟ್ರೀಯ ಹಗ್ಗಜಗ್ಗಾಟ (ಟಗ್ ಆಫ್ ವಾರ್) ಆಟಗಾರನೊಬ್ಬನನ್ನು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪುಲ್ಲೂರು ಎಕೆಜಿ ಕ್ಲಬ್ ಬಳಿ ನಿವಾಸಿ ಇಟ್ಟು ಅಲಿಯಾಸ್ ಬೈಜು (37) ಮೃತಪಟ್ಟವರು. ಶನಿವಾರ ಸಂಜೆ 4 ಗಂಟೆಯ ಸುಮಾರಿಗೆ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಇವರ ದೇಹ ಪತ್ತೆಯಾಗಿದೆ.
ಮೃತದೇಹವನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಭಾನುವಾರ ಮರಣೋತ್ತರ ಪರೀಕ್ಷೆಯ ಬಳಿಕ ಮನೆಗೆ ತರಲಾಗುವುದು. ಇವರು ಕಾಸರಗೋಡಿನಲ್ಲಿ ಮೊಬೈಲ್ ಟವರ್ ಒಂದರ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ರಾಷ್ಟ್ರೀಯ ಹಗ್ಗಜಗ್ಗಾಟ ಚಾಂಪಿಯನ್‌ಶಿಪ್‌ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿ ಮೂರು ಬಾರಿ ಸ್ಪರ್ಧಿಸಿದ್ದ ಬೈಜು, ಪದಕಗಳನ್ನು ಜಯಿಸಿದ್ದರು. ಕಾಸರಗೋಡು ಜಿಲ್ಲೆಯ ಪರವಾಗಿ ಹಲವು ಬಾರಿ ರಾಜ್ಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲೂ ಭಾಗವಹಿಸಿದ್ದರು. ಎಕೆಜಿ ಪುಲ್ಲೂರು ತಂಡದ ಪ್ರಮುಖ ಹಗ್ಗಜಗ್ಗಾಟ ಆಟಗಾರನಾಗಿದ್ದ ಇವರು, ಹಲವಾರು ಕ್ಲಬ್‌ಗಳಿಗೆ ತರಬೇತಿಯನ್ನೂ ನೀಡಿದ್ದರು. ಇವರು ಸಕ್ರಿಯ ಸಿಪಿಐ(ಎಂ) ಕಾರ್ಯಕರ್ತರಾಗಿದ್ದರು. ಮೃತರ ತಾಯಿ ವನಜಾ.
