ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ನೂತನ ಕಟ್ಟಡ ಉದ್ಘಾಟನೆ; ಬಿಜೆಪಿ ಕೇರಳದಲ್ಲಿ ಎಡ-ಬಲ ರಂಗಗಳಿಗೆ ಪರ್ಯಾಯ ಶಕ್ತಿಯಾಗಲಿದೆ- ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್


 ಕುಂಬಳೆ: ಎಲ್ಲಾ ಕಾಲದಲ್ಲೂ ಒಳಸಂಚು ನಡೆಸಿ ಬಿಜೆಪಿಯನ್ನು ಸೋಲಿಸಬಹುದು ಮತ್ತು ಭ್ರಷ್ಟಾಚಾರವನ್ನು ಯಾರೂ ಪ್ರಶ್ನಿಸುವುದಿಲ್ಲ ಎಂಬ ಎಡ-ಬಲ ರಂಗಗಳ ಭ್ರಮೆ ಈ ವಿಧಾನಸಭಾ ಚುನಾವಣೆಯೊಂದಿಗೆ ಧೂಳೀಪಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ. ಅವರು ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮೂವರು ಬಿಜೆಪಿ ಪ್ರತಿನಿಧಿಗಳನ್ನು ರಾಜ್ಯ ವಿಧಾನಸಭೆಗೆ ಆಯ್ಕೆ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮೇಲಿನ ನಿರೀಕ್ಷೆ ಮತ್ತು ಜವಾಬ್ದಾರಿ ಹೆಚ್ಚಾಗಿದೆ. ಕೇರಳದಲ್ಲಿ ಎಡ ಮತ್ತು ಬಲ ರಂಗಗಳಿಗೆ ಪರ್ಯಾಯವಾಗಿ ಜನರು ಬಿಜೆಪಿಯನ್ನು ನೋಡುತ್ತಿದ್ದಾರೆ ಹಾಗೂ ಈ ಮೂವರು ಶಾಸಕರು ವಿಧಾನಸಭೆಯಲ್ಲಿ ತಿದ್ದುಪಡಿ ಶಕ್ತಿಯಾಗಿ ಮೂಡಿಬರಲಿದ್ದಾರೆ ಎಂದು ಅಶ್ವಿನಿ ಆಶಯ ವ್ಯಕ್ತಪಡಿಸಿದರು.

ಉದ್ಘಾಟನೆಗೆ ಮುನ್ನ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಹಾಗೂ ಹಿರಿಯ ನಾಯಕ ವಿ. ರವೀಂದ್ರನ್ ಧ್ವಜಾರೋಹಣ ನೆರವೇರಿಸಿದರು.

ಕುಂಬಳೆ ಪಂಚಾಯತ್ ಸೌತ್ ಏರಿಯಾ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಜನಸಂಘ ಮತ್ತು ಬಿಜೆಪಿಯ ಹಿರಿಯ  ಕಾರ್ಯಕರ್ತರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ಸತೀಶ್ ಚಂದ್ರ ಭಂಡಾರಿ, ತುರ್ತುಪರಿಸ್ಥಿತಿ ಹೋರಾಟಗಾರ ಹಾಗೂ ಜನಸಂಘದ ಹಿರಿಯ ಕಾರ್ಯಕರ್ತ ಸುಬ್ಬಯ್ಯ ರೈ, ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಮಯ್ಯ, ಮಂಡಲ ಉಪಾಧ್ಯಕ್ಷರಾದ ವಿಕ್ರಮ್ ಪೈ, ಪ್ರೇಮಾವತಿ, ಕುಂಬಳೆ ಪಂಚಾಯತ್ ನಾರ್ತ್ ಏರಿಯಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ, ಪಂಚಾಯತ್ ಜನಪ್ರತಿನಿಧಿಗಳು, ವಿನೋದ್ ಕೋಯಿಪ್ಪಾಡಿ ಕಡಪ್ಪುರಂ ಮತ್ತು ಆರಂಭಿಕ ಕಾಲದ ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು