ಕಾಸರಗೋಡು: ನರೇಂದ್ರ ಮೋದಿ ಸರ್ಕಾರದ 12ನೇ ವರ್ಷಾಚರಣೆಯ ಅಂಗವಾಗಿ ಬಿಜೆಪಿಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ 'ನವ ಭಾರತ ಸದಸ್ಸು' ಎಂಬ ಹೆಸರಿನಲ್ಲಿ ವಿಕಸಿತ ಭಾರತ ಸಮಾವೇಶವನ್ನು ಆಯೋಜಿಸಲಾಯಿತು. ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು.
ಜಗತ್ತಿನಲ್ಲಿ ಹತ್ತನೇ ಆರ್ಥಿಕ ಶಕ್ತಿಯಾಗಿದ್ದ ಭಾರತವನ್ನು ಕೇವಲ 12 ವರ್ಷಗಳಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿಸಲು ನರೇಂದ್ರ ಮೋದಿಯವರಿಗೆ ಸಾಧ್ಯವಾಗಿದೆ ಎಂದು ಅಶ್ವಿನಿ ಅವರು ಹೇಳಿದರು. ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ಅಸ್ಥಿರತೆಯಿಂದ ನಲುಗಿದ್ದ ಭಾರತಕ್ಕೆ ಆರ್ಥಿಕ ಚೇತರಿಕೆ ಮತ್ತು ದಿಕ್ಸೂಚಿ ದೊರೆತದ್ದು ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿದೆ. ಜನಕಲ್ಯಾಣ ಯೋಜನೆಗಳ ಜೊತೆಗೆ ಬೃಹತ್ ಮೂಲಸೌಕರ್ಯ ಯೋಜನೆಗಳನ್ನೂ ಮೋದಿ ಜಾರಿಗೊಳಿಸಿದ್ದಾರೆ. ವಂದೇ ಭಾರತ್‌ನಿಂದ ಹಿಡಿದು ಬುಲೆಟ್ ರೈಲುಗಳವರೆಗೆ, ಯುದ್ಧ ವಿಮಾನಗಳಿಂದ ಸೆಮಿಕಂಡಕ್ಟರ್‌ಗಳವರೆಗೆ ಸ್ವದೇಶಿಯಾಗಿಯೇ ನಿರ್ಮಿಸಲು ಭಾರತಕ್ಕೆ ಸಾಧ್ಯವಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳ ಪ್ರಗತಿಯು 2047ರ ವೇಳೆಗೆ 'ವಿಕಸಿತ ಭಾರತ' ಎಂಬ ಗುರಿಯನ್ನು ತಲುಪಲು ಭಾರತಕ್ಕೆ ಸಹಕಾರಿಯಾಗಲಿದೆ ಎಂದು ಅಶ್ವಿನಿ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನುಲಾಲ್ ಮೇಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷ ಎಂ. ಬಲರಾಜ್, ಕರ್ಷಕ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕುಞಿಕಣ್ಣನ್ ಬಳಾಲ್, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೊಂಡ, ಜಿಲ್ಲಾ ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ ಸೇರಿದಂತೆ ಬಿಜೆಪಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾವೇಶಕ್ಕೆ ಮುನ್ನ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಸಂಸ್ಮರಣೆ ಹಾಗೂ ಪುಷ್ಪಾರ್ಚನೆ ನಡೆಯಿತು.
