ಸೀತಾಂಗೋಳಿ : ಸಮಸ್ತ ಹಿಂದುಗಳು ಎಲ್ಲಾ ಅಸಮಾನತೆಯನ್ನು ಮೆಟ್ಟಿ ನಿಂತು ಒಂದಾಗಿ ಬೆರೆತು ಬಾಳಬೇಕಾದ ದಿನಗಳು ಕಾಲಘಟ್ಟದ ಅನಿವಾರ್ಯವಾಗಿದೆ.ಜಾತಿ ನೀತಿ, ರಾಜಕೀಯ, ಬಡವ ಬಲ್ಲಿದ ಎನ್ನುವ ಎಲ್ಲಾ ಗೋಡೆಗಳನ್ನು ಪುಡಿಗಟ್ಟಿ ಹಿಂದುಗಳೆಲ್ಲಾ ಒಂದಾಗಿ ಒಗ್ಗಟ್ಟಾಗಿ ಬದುಕಿ ಬಾಳುವುದಕ್ಕೆ ಪುತ್ತಿಗೆಯ ಪವಿತ್ರಮಣ್ಣಲ್ಲಿ ಮಾ.8ರಂದು ನಡೆಯಲಿರುವ ವಿರಾಟ್ ಹಿಂದು ಸಂಗಮ ನಾಂದಿ ಹಾಡಲಿ. ಹಿಂದುಗಳು ವಿಘಟನೆಹೊಂದಲು ಹಲವು ಪ್ರತ್ಯೇಕ ಕಾರಣಗಳಿರಬಹುದು. ಆದರೆ ಒಟ್ಟಾಗಲು ಯಾವ ಕಾರಣವೂ ಬೇಕಾಗಿಲ್ಲ. ಸಮಾನತೆ ಮತ್ತು ಸಾಮರಸ್ಯವೊಂದೇ ಅದಕ್ಕೆ ಹಾದಿಯೆಂದು ಗ್ರಾಮೀಣ ಬ್ಯಾಂಕಿನ ನಿವೃತ್ತ ವಲಯಧಿಕಾರಿ ದಾಮೋಧರ ಡಿ. ದೇಲಂಪಾಡಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.ಸೀತಾಂಗೋಳಿ ಶ್ರೀ ದೇವಿ ಭಜನಾ ಮಂದಿರದಲ್ಲಿ ನಡೆದ ವಿರಾಟ್ ಹಿಂದು ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಉದಯಶಂಕರ ಭಟ್ ಕರೋಡಿ ಅವರು ಸೂರಂಬೖಲು ಸಾಯಿರಾಮ್ ಭಟ್ ನಗರದಲ್ಲಿ ನಡೆಯಲಿರುವ ವಿರಾಟ್ ಹಿಂದು ಸಂಗಮದ ಆಮಂತ್ರಣ ಪತ್ರಿಕೆಯನ್ನು ಸಮಿತಿಯ ಅಧ್ಯಕ್ಷರಾದ ದಾಮೋಧರ ದೇಲಂಪಾಡಿ ಅವರಿಗೆ ನೀಡುವ ಮೂಲಕ ಬಿಡುಗಡೆ ಮಾಡಿದರು.ಉದಯಶಂಕರ ಭಟ್ ಮತ್ತು ಕ್ಯಾಂಪ್ಕೋ ನಿರ್ಧೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ವಿಘ್ನೇಶ್ವರ ಮಾಸ್ಟರ್ ಗುಣಾಜೆ, ಅಶೋಕ ಮಾಸ್ಟರ್ ಬಾಡೂರು, ರವಿಶಂಕರ್ ಸೂರಂಬೈಲು, ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಕೃಷ್ಣ ಪ್ರಸಾದ್ ಮುಗು ಸೇರಿದಂತಿರುವ ಗಣ್ಯರು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ರವಿಶಂಕರ್ ಸೂರಂಬೈಲು ಅವರು ತಮ್ಮ ದೇಣಿಗೆಯನ್ನು ನೀಡಿ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು. ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಮಾಸ್ತರ್ ಮುಗು ಪ್ರಾಸ್ತಾಪ ನುಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹರೀಶ್ ಸಿದ್ಧಿಬೖಲು ಸ್ವಾಗತಿಸಿ, ಅವಿನಾಶ್ ಕಾರಂತ ವಂದಿಸಿದರು.