ಪೈವಳಿಕೆ : ಇಲ್ಲಿಗೆ ಸಮೀಪದ ಚೇವಾರು ಸಮೀಪ ಕುಡಾಲು ಮೇರ್ಕಳ ಎಂಬಲ್ಲಿ ಮಹಿಳೆಯ ಮೃತದೇಹ ಮನೆಯ ವರಾಂಡದಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಲಂಕಿನಡ್ಕ ನಿವಾಸಿ ಸವಿತಾ (51) ಮೃತಪಟ್ಟ ಮಹಿಳೆ.
ಇಂದು (ಶನಿವಾರ) ಬೆಳಗ್ಗೆ ಮನೆಯ ವರಾಂಡದಲ್ಲಿದ್ದ ಬೆಡ್ನಲ್ಲಿ ಸವಿತಾ ಮೃತದೇಹ ಪತ್ತೆಯಾಗಿದೆ ಕರ್ನಾಟಕದ ಶಿವಮೊಗ್ಗ ಮೂಲದ ಚೆನ್ನಪ್ಪ ಎಂಬವರೊಡನೆ ವಾಸಿಸುತ್ತಿದ್ದ ಸವಿತಾ ಮೃತಪಟ್ಟ ವಿಚಾರ ಸ್ವತಃ ಚೆನ್ನಪ್ಪರೇ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹದ ಕೈ ಹಾಗೂ ಕಾಲುಗಳಲ್ಲಿ ಗಾಯದ ಗುರುತುಗಳಿರುವುದಾಗಿ ತಿಳಿದುಬಂದಿದ್ದು, ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯಂತೆ ಕುಂಬಳೆ ಸಿಐ ಆರ್.ಪಿ. ಅನೂಪ್ ಕೃಷ್ಣ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಕಳೆದ 16 ವರ್ಷಗಳಿಂದ ಚೆನ್ನಪ್ಪ ಸವಿತಾ ಅವರೊಂದಿಗೆ ವಾಸಿಸುತ್ತಿದ್ದಳೆಂದು ತಿಳಿದುಬಂದಿದ್ದು ಲೈಫ್ ಯೋಜನೆಯಡಿ ನಿರ್ಮಿಸಲಾದ ಮನೆಯಲ್ಲಿ ಸವಿತಾ ಹಾಗೂ ಚೆನ್ನಪ್ಪ ವಾಸಿಸುತ್ತಿದ್ದರು. ಇಬ್ಬರೂ ಆಗಾಗ್ಗೆ ಮದ್ಯಪಾನ ಮಾಡಿ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
