ಬದಿಯಡ್ಕ: ಕೋಳಿ ಅಂಕದ ವಿರುದ್ಧ ಬದಿಯಡ್ಕ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. 7 ಕೋಳಿಗಳು ಮತ್ತು 3,800 ರೂ.ಗಳೊಂದಿಗೆ 7 ಜನರನ್ನು ಎಸ್‌ಐ ಸುನಿಲ್ ಕುಮಾರ್.ಟಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಬ್ರಾಣ ತಿಲಕ್ ನಡರಿನ ಜಯರಾಮ (36), ಆದೂರು ಕುಂಟಾರಿನ ಪದ್ಮನಾಭ (45), ನೀರ್ಚಾಲು ಪರಿಶಿಷ್ಟ ಜಾತಿ ಉನ್ನತಿಯ ನಾರಾಯಣ (45), ಪಳ್ಳಕ್ಕರ ಪಾಕಂ ತಿರುವೋಣಂ ಹೌಸ್‌ನ ಶಶಿ (65), ಬದಿಯಡ್ಕ ಪೀಲಿತ್ತಡುಕದ ಪ್ರಜ್ವಲ್ (35), ಪೆರುಂಬಳ ಕೋಳಿಯಡ್ಕದ ಪ್ರಮೋದ್ (45) ಹಾಗೂ ಕುಂಬಳೆ ಮುಜಂಗಾವಿನ ಚಂದ್ರನ್ (45) ಬಂಧಿತರಾಗಿದ್ದಾರೆ.
ನಿನ್ನೆ ಸಂಜೆ 7 ಗಂಟೆಗೆ ಎಸ್‌ಐ ಸುನಿಲ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬಿರ್ಮ್ಮಿನಡ್ಕ ಹತ್ತಿರದ ಪಡಿಯಡ್ಪುವಿನಲ್ಲಿ ನಡೆಸಿದ ದಾಳಿಯಲ್ಲಿ ಈ ಏಳು ಜನರ ತಂಡ ಸಿಕ್ಕಿಬಿದ್ದಿದೆ. ಪೊಲೀಸ್ ತಂಡವನ್ನು ಕಂಡ ಕೂಡಲೇ ಕೆಲವರು ಓಡಿ ಪರಾರಿಯಾಗಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ದೇವಸ್ಥಾನದ ಉತ್ಸವಗಳ ಮರೆಯಲ್ಲಿ ಕೋಳಿ ಅಂಕಗಳು ನಡೆಯುತ್ತಿರುವುದಾಗಿ ಮಾಹಿತಿ ಲಭಿಸಿದ್ದು, ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐ ತಿಳಿಸಿದ್ದಾರೆ.
Tags
ಬದಿಯಡ್ಕ
