ಬೋರ್‌ವೆಲ್‌ ಟ್ರಾಕ್ಟರ್ ನಿಯಂತ್ರಣ ತಪ್ಪಿ ಮಗುಚಿ ಮನೆಯ ಮೇಲೆ ಬಿದ್ದು ಇಬ್ಬರು ಕಾರ್ಮಿಕರು ಮೃತ್ಯು


 ಕಾಸರಗೋಡು:  ಬೋರ್‌ವೆಲ್‌ ಟ್ರಾಕ್ಟರ್ ನಿಯಂತ್ರಣ ತಪ್ಪಿ ಮಗುಚಿ ಮನೆಯ ಮೇಲೆ ಬಿದ್ದು ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಇಂದು (ಶನಿವಾರ) ಮುಂಜಾನೆ 2 ಗಂಟೆ ವೆಳ್ಳರಿಕುಂಡ್ ಸಮೀಪದ ಎಳೇರಿಯ ವರಕ್ಕಾಡ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಮಧ್ಯಪ್ರದೇಶ ಮೂಲದ ದೇವೇಂದ್ರ ಹಾಗೂ ಛತ್ತೀಸ್‌ಗಢ ಮೂಲದ ಮನಾಸರ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ವಾಹನದಲ್ಲಿದ್ದವರಾಗಿದ್ದಾರೆ.

ವರಕ್ಕಾಡ್ ಬ್ಯಾಂಕ್ ಸಮೀಪದ ದೊಡ್ಡ ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ಟ್ರಾಕ್ಟರ್ ನಿಯಂತ್ರಣ ತಪ್ಪಿ, ಜೇಸನ್ ಎಂಬುವವರ ಕುಟುಂಬ ವಾಸಿಸುತ್ತಿದ್ದ ಬಾಡಿಗೆ ಮನೆಯ ಮೇಲೆ ಮಗುಚಿ ಬಿದ್ದಿದೆ. ಅಪಘಾತದ ಭೀಕರ ಶಬ್ದ ಕೇಳಿ ಕೂಡಲೇ ಓಡಬಂದ ಸ್ಥಳೀಯರು ರಕ್ಷಣಾ ಕಾರ್ಯ ನಡೆಸಿ ಅವಶೇಷಗಳಡಿಯಿಂದ ಹೊರತೆಗೆದರಾದರೂ, ಅಷ್ಟರಲ್ಲಾಗಲೇ ಇಬ್ಬರೂ ಮೃತಪಟ್ಟಿದ್ದರು. ಮೃತದೇಹಗಳನ್ನು ಕಾಞಂಗಾಡು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಇದೇ ಇಳಿಜಾರು ಪ್ರದೇಶದಲ್ಲಿ ಈ ಹಿಂದೆ ಕೂಡ ನಾಲ್ಕು ದೊಡ್ಡ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು