ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿನ ನೀರ್ಚಾಲು ವಾರ್ಡಿನ ನೇತೃತ್ವದಲ್ಲಿ ಕುಂಟಿಕಾನ ಮುಂಡಿಗೆ ಧೂಮಾವತಿ ವನದ ಪರಿಸರದಲ್ಲಿ ವಿಶ್ವ ನದಿ ದಿನದ ಅಂಗವಾಗಿ ನದಿ ಸಂರಕ್ಷಣಾ ಪ್ರತಿಜ್ಞೆಯನ್ನು ಮಾಡಲಾಯಿತು. ಗ್ರಾಮಪಂಚಾಯತು ಅಧ್ಯಕ್ಷ ಶಂಕರ ಡಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನದಿಗಳ ಮಹತ್ವ ಹಾಗೂ ಅವುಗಳ ಸಂರಕ್ಷಣೆಯ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ನಾಡಿನ ಜೀವನಾಡಿ ನದಿಗಳ ರಕ್ಷಣೆ ಅಗತ್ಯ : ಶಂಕರ ಡಿ.
ನದಿಗಳು ಬರಿ ನೀರಿನ ಮೂಲಗಳಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ಜೀವಸಂಕುಲದ ಜೀವಾಳ. ಪ್ರಕೃತಿಯ ಕೊಡುಗೆಯಾದ ನದಿಗಳನ್ನು ಗೌರವಿಸುವುದು ಮತ್ತು ಅವುಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ನದಿ ಮತ್ತು ತೋಡುಗಳಿಗೆ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದ ಜಲಸಂಪನ್ಮೂಲ ಕಲುಷಿತಗೊಳ್ಳುತ್ತಿದೆ. ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸ್ಥಳೀಯ ಆಡಳಿತದ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಆಗಿದೆ. ಬದಿಯಡ್ಕ ಪಂಚಾಯತು ವ್ಯಾಪ್ತಿಯಲ್ಲಿರುವ ಜಲಸಂಪನ್ಮೂಲಗಳ ಸಂರಕ್ಷಣೆಗೆ ಮತ್ತು ಜಲಮೂಲಗಳ ಪುನಶ್ಚೇತನಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹಲವು ಸುಸ್ಥಿರ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಗ್ರಾಮಪಂಚಾಯತು ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ನದಿ ಸಂರಕ್ಷಣೆ ಎಂಬುದು ಒಂದೇ ದಿನದ ಆಚರಣೆಗೆ ಸೀಮಿತವಾಗಬಾರದು. ಯುವಜನರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ನದಿಗಳ ಸ್ವಚ್ಛತೆ ಹಾಗೂ ಜಲ ಜಾಗೃತಿ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನೀರಿನ ಮೂಲಗಳು ಬತ್ತಿ ಹೋದರೆ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಗಿಡ-ಮರಗಳನ್ನು ಬೆಳೆಸುವುದರೊಂದಿಗೆ ಹಾಗೂ ನದಿ ತೀರಗಳನ್ನು ರಕ್ಷಿಸುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ ಎಂದರು. ನಿವೃತ್ತ ಅಧ್ಯಾಪಕ ವೆಂಕಟರಾಜ ವಾಶೆಮನೆ ಮುಖ್ಯ ಅತಿಥಿಗಳಾಗಿ ಮಾತನಾಡಿ ಜಲಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು.
ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಪ್ರತಿಜ್ಞೆಯನ್ನು ಬೋಧಿಸಿದರು. ವಿಶ್ವೇಶ್ವರ ಶರ್ಮ ಕುಂಟಿಕಾನ ಸ್ವಾಗತಿಸಿ, ರಾಜೇಂದ್ರಕೃಷ್ಣ ಕೊಲ್ಲಂಪಾರೆ ವಂದಿಸಿದರು. ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕೆ., ಉಷಾ, ಮಧುಸೂದನ ಕಂಗಿಲ, ಸ್ಥಳೀಯರಾದ ರವಿಶಂಕರ ಕೊಲ್ಲಂಪಾರೆ ಪಾಲ್ಗೊಂಡಿದ್ದರು.
ವಿಶ್ವ ನದಿ ದಿನ :
ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರವನ್ನು `ವಿಶ್ವ ನದಿ ದಿನ'ವಾಗಿ ಆಚರಿಸಲಾಗುತ್ತದೆ. ಕಾಡುಗಳಿಲ್ಲದಿದ್ದರೆ ನದಿಗಳಿಲ್ಲ, ನದಿಗಳಿಲ್ಲದಿದ್ದರೆ ನೀರಿಲ್ಲ, ನೀರಿಲ್ಲದಿದ್ದರೆ ಜೀವವಿಲ್ಲ" ಎಂಬ ಪರಿಕಲ್ಪನೆ 2026ರ ವಿಶ್ವ ನದಿ ದಿನಾಚರಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
