ಮಂಜೇಶ್ವರ: ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಮಂಜೇಶ್ವರ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಂದು ಕೋಳಿಯನ್ನು ವಶಕ್ಕೆ ಪಡೆಯಲಾಗಿದ್ದು, 14,000 ರೂಪಾಯಿ ನಗದು ಸಹ ವಶಪಡಿಸಲಾಗಿದೆ.
ಇಂದು ಮಧ್ಯಾಹ್ನ 12:30 ರ ಸುಮಾರಿಗೆ ವೋರ್ಕಾಡಿ ಬಾಲಿಗುರಿ ಬೋಳದ ನಿರ್ಜನ ಮೈದಾನದಲ್ಲಿ ಜನರು ಗುಂಪುಗೂಡಿ ನಿಂತಿರುವುದನ್ನು ಗಮನಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರನ್ನು ಕಂಡು ಹಲವರು ಓಡಿ ರಕ್ಷಿಸಿಕೊಂಡಿದ್ದಾರೆ.
ಬಂಧಿತರನ್ನು ತಲಪಾಡಿ ದೇವಪುರದ ಮಹೇಶ್ ಶೆಟ್ಟಿ (40), ಮಂಜೇಶ್ವರ ಕಡಂಬಾರ್ ಬಳಿಯ ಮನೋಜ್ (45), ಬಂಟ್ವಾಳದ ವಿನ್ಸೆಂಟ್ ಡಿಸೋಜಾ (65), ಬಂಟ್ವಾಳ ಬಿ ಮೂಡದ ಇರ್ಫಾನ್ (34) ಮತ್ತು ಕಡಂಬಾರ್ ಹೆದ್ದಾರಿಯ ಕಿರಣ್ ಕುಮಾರ್ (42) ಎಂದು ಗುರುತಿಸಲಾಗಿದೆ. ಕೋಳಿ ಅಂಕ ಆಡುತ್ತಿದ್ದ ಸ್ಥಳದಲ್ಲಿ ಹಣವು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸ್ ತಂಡದಲ್ಲಿ ಎಸ್‌ಐ ವಿಷ್ಣು ಎಸ್. ನಾಯರ್, ಟ್ರೈನಿ ಎಸ್‌ಐ ಅರ್ಜುನ್ ಅರವಿಂದ್, ಸಿಪಿಓಗಳಾದ ಸಜಿತ್, ಸನೂಪ್ ಮತ್ತು ಚಾಲಕ ಸಜೀಶ್ ಇದ್ದರು.
Tags
ಮಂಜೇಶ್ವರ
