ತಿರುವನಂತಪುರಂ: 13 ವರ್ಷದ ಬಾಲಕಿಯ ಮೇಲೆ ನೆರೆಮನೆಯ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದನ್ನು ಕಂಡ ತಂದೆ, ಆರೋಪಿಯ ಕಾಲು ಮುರಿದ ಘಟನೆ ತಿರುವನಂತಪುರಂನ ಪೋತನ್‌ಕೋಡ್‌ನಲ್ಲಿ ಸೋಮವಾರ ಸಂಜೆ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 40 ವರ್ಷದ ನೆರೆಮನೆತ ವ್ಯಕ್ತಿ ಬಾಲಕಿಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದನು. ಬಾಲಕಿ ಮನೆಗೆ ಬಂದಾಗ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಬಾಲಕಿಯ ತಂದೆ, ಘಟನೆಯನ್ನು ಕಣ್ಣಾರೆ ಕಂಡು ಆಕ್ರೋಶಗೊಂಡು ಸಮೀಪದಲ್ಲಿದ್ದ ಮರದ ತುಂಡಿನಿಂದ ನೆರೆಹೊರೆಯವನಿಗೆ ಮನಬಂದಂತೆ ಥಳಿಸಿದ್ದಾರೆ. ಏಟಿನ ರಭಸಕ್ಕೆ ಆತನ ಕಾಲು ಮುರಿದಿದೆ.
ಆದರೆ, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿ ಪೊಲೀಸರಿಗೆ ದೂರು ನೀಡಿದ್ದನು. ಇದರ ಆಧಾರದ ಮೇಲೆ ಪೋತನ್‌ಕೋಡ್ ಪೊಲೀಸರು ಬಾಲಕಿಯ ತಂದೆಯನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದರು.
ತದನಂತರ, ಮಕ್ಕಳ ಕಲ್ಯಾಣ ಸಮಿತಿ (CWC) ಮತ್ತು ಪೊಲೀಸರು ನಡೆಸಿದ ಕೌನ್ಸಿಲಿಂಗ್‌ನಲ್ಲಿ ಬಾಲಕಿಯು ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಯತ್ನವನ್ನು ಬಹಿರಂಗಪಡಿಸಿದ್ದಾಳೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಪೊಲೀಸರು ನೆರೆಹೊರೆಯವನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿಯ ಬಂಧನ ಶೀಘ್ರದಲ್ಲೇ ದಾಖಲಾಗಲಿದೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
