ಮಂಗಳೂರು: ಎಟಿಎಂ ಕೌಂಟರ್‌ನ ಗಾಜು ಮೈಮೇಲೆ ಬಿದ್ದ ಪರಿಣಾಮ ಕಾಞಂಗಾಡ್ ಮೂಲದ ಬ್ಯಾಂಕ್ ಉದ್ಯೋಗಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಅಟೆಂಡರ್ ಆಗಿದ್ದ, ಕಾಞಂಗಾಡ್ ನಿತ್ಯಾನಂದ ಆಶ್ರಮದ ಬಳಿ ವಾಸಿಸುವ ಬಾಲಕೃಷ್ಣನ್ (56) ಮೃತಪಟ್ಟ ದುರ್ದೈವಿ.
ಕೆಲಸ ಮುಗಿಸಿ ಸಮೀಪದ ಎಟಿಎಂ ಕೌಂಟರ್‌ಗೆ ನಗದು ವ್ಯವಹಾರಕ್ಕಾಗಿ ತೆರಳಿದ್ದ ಬಾಲಕೃಷ್ಣನ್, ಕೌಂಟರ್ ಒಳಗಡೆ ಆಕಸ್ಮಿಕವಾಗಿ ಜಾರಿ ತಲೆಗೆ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಎಟಿಎಂ ಕೌಂಟರ್‌ನ ಗ್ಲಾಸ್ ಒಡೆದು ಅವರ ಕೈ ಹಾಗೂ ಮೈಮೇಲೆ ಬಿದ್ದಿದೆ. ಘಟನೆ ನಡೆದ ತಕ್ಷಣ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ನಂತರ ಆ ದಾರಿಯಾಗಿ ಹೋದ ಸಾರ್ವಜನಿಕರು ಇದನ್ನು ಗಮನಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ರಾತ್ರಿ 11 ಗಂಟೆಯ ಸುಮಾರಿಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಮಂಗಳೂರಿನಲ್ಲೇ ತಂಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣನ್, ವಾರಕ್ಕೊಮ್ಮೆ ಮಾತ್ರ ಕಾಞಂಗಾಡ್‌ಗೆ ಬರುತ್ತಿದ್ದರು. ಇವರು ನಿತ್ಯಾನಂದ ಆಶ್ರಮದ ಬಳಿಯ ದಿವಂಗತ ದಾಮೋದರ ಮತ್ತು ಸರೋಜಿನಿ ದಂಪತಿಯ ಪುತ್ರರಾಗಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಕಾಞಂಗಾಡ್‌ಗೆ ತರಲಾಗುವುದು. ಮೃತರು ಪತ್ನಿ ಭಾರತಿ, ಪುತ್ರಿ ಶ್ರದ್ಧಾ ಹಾಗೂ ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಗಳಾಗಿರುವ ದಿನಕರನ್, ಬಾಲಚಂದ್ರನ್ ಮತ್ತು ಅನಿವಾಸಿ ಭಾರತೀಯರಾಗಿರುವ ಚಂದ್ರಹಾಸ ಎಂಬ ಸಹೋದರರನ್ನು ಅಗಲಿದ್ದಾರೆ.
