ಕಾಸರಗೋಡು: ಕೆಲಸವಿದೆ ಎಂದು ಹೇಳಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕನನ್ನು ಕರೆಸಿಕೊಂಡು, ಅಪಹರಿಸಿ ಮೊಬೈಲ್ ಫೋನ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ಮಜಲ್ ನಿವಾಸಿಗಳಾದ ಉಬೈದುಲ್ಲಾ ಇಜಾಸ್ (25) ಮುಹಮ್ಮದ್ ಫರ್ಹಾನ್ (21) ಮತ್ತು ಚೌಕಿ ನಿವಾಸಿ ಅಹಮ್ಮದ್ ಮುಹಮ್ಮದ್ (40) ಬಂಧಿತ ಆರೋಪಿಗಳು. ಮೇಲ್ಪರಂಬ ಎಸ್‌ಐ ಟಿ. ಅಖಿಲ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಚೆರ್ಕಳ ಇಂದಿರಾನಗರದಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳ ಮೂಲದ ರಾಮನ್ ಬರ್ಮನ್ (33) ದೂರು ನೀಡಿದ ವ್ಯಕ್ತಿ. ಕೆಲಸವಿದೆ ಎಂದು ನಂಬಿಸಿ ಆರೋಪಿಗಳು ಈತನನ್ನು ಚಟ್ಟಂಚಾಲ್ ಫ್ಲೈಓವರ್ ಮುಕ್ತಾಯಗೊಳ್ಳುವ ಭಾಗಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬುಧವಾರ ರಾತ್ರಿ 8.30ರ ಸುಮಾರಿಗೆ ಸುಮಾರು 16,000 ರೂ. ಮೌಲ್ಯದ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ತಡೆಯಲು ಯತ್ನಿಸಿದಾಗ ಯುವಕನಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
